ADVERTISEMENT

`ಪಡಿತರ ಮೂಲಕ ಪ್ರಾದೇಶಿಕ ಧಾನ್ಯ ಕೊಡಿ'

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 11:07 IST
Last Updated 11 ಜುಲೈ 2013, 11:07 IST

ಹಾವೇರಿ: ಒಂದು ರೂಪಾಯಿಗೆ 1 ಕೆ.ಜಿ.ಯಂತೆ 30 ಕೆಜಿ ಅಕ್ಕಿಯನ್ನು ನೀಡುವ ಯೋಜನೆ ಆರಂಭಿಸಿರುವುದು ಸಂತಸದ ಸಂಗತಿ. ಆದರೆ, ಅಕ್ಕಿಯನ್ನೇ ನೀಡಬೇಕೆಂಬ ಹಠದಿಂದ ಬೇರೆ ರಾಜ್ಯದಿಂದ ಅಕ್ಕಿ ತರಿಸಿಕೊಳ್ಳುವ ಬದಲು, ಆಯಾ ಪ್ರದೇಶದಲ್ಲಿ ಆಹಾರಕ್ಕಾಗಿ ಬಳಸುವ ಜೋಳ, ರಾಗಿ, ಗೋಧಿಯಂತಹ ಧಾನ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಯುಕ್ತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೋರಿಶೆಟ್ಟರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು,ಜೋಳ, ಗೋದಿ, ರಾಗಿಯಂತಹ ಧಾನ್ಯಗಳನ್ನು ವಿತರಣೆ ಮಾಡುವುದರಿಂದ ಬೇರೆ ರಾಜ್ಯದಿಂದ ಅಕ್ಕಿ ತರಿಸುವ ಹೊರೆ ಕಡಿಮೆಯಾಗುವುದರ ಜತೆಗೆ ಪ್ರಾದೇಶಿಕವಾಗಿ ಬೆಳೆಯುವ ಬೆಳೆಗಳಿಗೆ ಹಾಗೂ ಅಲ್ಲಿನ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಬಿಪಿಎಲ್ ಕಾರ್ಡ್‌ದಾರರಿಗೆ 30 ಕೆ.ಜಿ.ಅಕ್ಕಿ ನೀಡುವಂತೆ ಎಪಿಎಲ್ ಕಾರ್ಡುದಾರರಿಗೆ ನೀಡುವ ಅಕ್ಕಿಯನ್ನು ನಿಲ್ಲಿಸದೇ, ಅವರಿಗೂ ಕೂಡಾ ಕನಿಷ್ಠ 10 ಕೆ.ಜಿ. ಅಕ್ಕಿ ನೀಡಬೇಕು. ಒಬ್ಬರ ಹೊಟ್ಟೆ ತುಂಬಿಸಲು ಇನ್ನೊಬ್ಬರು ಹಸಿವಿನಿಂದ ಬಳಲುವಂತಾಗಬಾರದು ಎಂದು ಸಲಹೆ ಮಾಡಿದ್ದಾರೆ.

ತಾವು ಈಗ ಮುಖ್ಯಮಂತ್ರಿಗಳಾಗಿ ಮುಂಗಡ ಪತ್ರ ಮಂಡನೆ ಮಾಡುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲಗಳನ್ನು ಕ್ರೋಢೀಕರಣಕ್ಕೆ ಒತ್ತು ನೀಡಬೇಕು. ಜತೆಗೆ ಕೇವಲ ಜನರನ್ನು ಓಲೈಸುವಕ್ಕಾಗಿ ಅಗ್ಗದ ಯೋಜನೆಗಳನ್ನು ರೂಪಿಸದೇ, ಶಾಶ್ವತ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

2020 ರ ನಂತರ ದೇಶದಲ್ಲಿ ನೀರು, ಆಹಾರ, ದನಕರುಗಳಿಗೆ ಮೇವಿನ ಅಭಾವದಿಂದ ಜನರ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕವನ್ನು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. ಅದನ್ನು ಗಮನಿಸಿ ಆ ನಿಟ್ಟಿನಲ್ಲಿ ಈಗಿನಿಂದಲೇ ಮುಜಾಗ್ರತೆ ಕ್ರಮ ತೆಗೆದುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ಇತ್ತೀಚೆಗೆ ಕಾಗಿನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆರೆ ಕಟ್ಟೆಗಳ ಅಭಿವೃದ್ಧಿಗಾಗಿ `ಕೆರೆ ಅಭಿವೃದ್ಧಿ ಪ್ರಾಧಿಕಾರ' ರಚನೆ ಮಾಡುವುದಾಗಿ ಹೇಳಿದ್ದೀರಿ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ ಅದನ್ನು ಇದೇ ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಅದಕ್ಕೆ ಬೇಕಾಗುವ ಅಗತ್ಯ ಹಣಕಾಸು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೇ ದನ ಕರುಗಳಿಗೆ ಬೇಕಾಗುವ ಹುಲ್ಲುಗಾವಲು ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಈಗಾಗಲೇ ಅಂತಹ ಪ್ರದೇಶಗಳನ್ನು ಪರಬಾರೆ ಮಾಡಿದ್ದರೆ, ಅವುಗಳನ್ನು ಸರ್ಕಾರ ವಾಪಸ್ಸು ಪಡೆದುಕೊಳ್ಳಬೇಕು. ಈ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಬೇಕು. ಜಾನುವಾರುಗಳಿಗೆ ಹುಲ್ಲುಗಾವಲು ಪ್ರದೇಶವನ್ನು ಕಡ್ಡಾಯವಾಗಿ ಮೀಸಲಾಗಿಡಬೇಕು ಎಂದು ಹೇಳಿದ್ದಾರೆ.   

ಹೊಸದಾಗಿ ಸರ್ಕಾರಿ ಶಾಲೆ ಕಾಲೇಜುಗಳನ್ನು ಮಂಜೂರಿ ಮಾಡಿ ಅವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಊರಿನ ಹೊರ ವಲಯದಲ್ಲಿ ಸರಳ ಭೂ-ಸ್ವಾದೀನ ಕಾಯ್ದೆಯನ್ನು ಜಾರಿಗೆ ತಂದು ಭೂಮಿ ಪಡೆದು ಶಾಲಾ ಕಟ್ಟಡಗಳನ್ನು ಕಟ್ಟಲು ದಿಟ್ಟ ಹೆಜ್ಜೆ ಇಟ್ಟು ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ಕ್ರೀಡಾಪಟುಗಳಿಗೆ ಯಾವುದೇ ಮಾನ್ಯತೆ, ಗೌರವಗಳು ಸಿಕ್ಕುತ್ತಿಲ್ಲ. ರಾಜ್ಯದಲ್ಲಿ ಸಮಗ್ರ ಕ್ರೀಡಾ ನೀತಿಯೊಂದನ್ನು ಜಾರಿಗೆ ತರಬೇಕು. ಅದರಲ್ಲಿ ಕ್ರೀಡಾಪಟುಗಳಿಗೆ ಶಾಲೆ, ಕಾಲೇಜುಗಳಲ್ಲಿ ಮೀಸಲಾತಿ ನೀಡುವುದು ಸೇರಿದಂತೆ ಉದ್ಯೋಗದಲ್ಲಿ ಕಡ್ಡಾಯವಾಗಿ ಮೀಸಲು ಸಿಗುವಂತೆ ಮಾಡಬೇಕು. ಪ್ರತಿಯೊಂದು ಕ್ರೀಡೆಗೆ ನುರಿತ ತರಬೇತಿದಾರನ್ನು ನೇಮಕ ಮಾಡಬೇಕು.

ಆಗ ಮಾತ್ರ ರಾಜ್ಯ ಮತ್ತು ರಾಷ್ಟ್ರದ ಕ್ರೀಡಾ ಕ್ಷೇತ್ರ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಮನಗಾನಬೇಕು ಎಂದು ಕೋರಿಶೆಟ್ಟರ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.