ADVERTISEMENT

ಪರಿಹಾರ ವಿಳಂಬ: ಪೀಠೋಪಕರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:15 IST
Last Updated 17 ಫೆಬ್ರುವರಿ 2011, 10:15 IST

ಹಾನಗಲ್ಲ: ತಾಲ್ಲೂಕಿನ ಅಕ್ಕಿ-ಆಲೂರ ಹಾಗೂ ಬಾಳೂರ ಗ್ರಾಮದ ರೈತರಿಗೆ ನೀಡಬೇಕಾದ ಪರಿಹಾರವನ್ನು ನೀಡದ ಹಿನ್ನೆಲೆಯಲ್ಲಿ ಹಾನಗಲ್ಲ ನೀರಾವರಿ ಇಲಾಖೆಯ ಏತನೀರಾವರಿ ಉಪವಿಭಾಗ ಕಚೇರಿಯ ಪೀಠೋಪಕರಣ ಜಪ್ತಿಗೆ ಇಲ್ಲಿನ ಜೆಎಂಎಫ್‌ಸಿ (ಹಿರಿಯ ವಿಭಾಗ) ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಸೋಮವಾರ ಜಪ್ತಿ ಕಾರ್ಯ ನಡೆಯಿತು.

1965ರಿಂದ 11 ರೈತರ ಸುಮಾರು 33 ಎಕರೆ ಹೊಲ-ಗದ್ದೆ ಧರ್ಮಾ ಜಲಾಶಯದ ಹಿರೆಕೆರಿ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಪ್ರತಿವರ್ಷ ಬೆಳೆ ಹಾನಿ ಅನುಭವಿಸಿರುವುದಾಗಿ ರೈತರು ಹೇಳಿದ್ದರು.

1995ರಲ್ಲಿ  ನ್ಯಾಯಾಲಯದ ಮೊರೆ ಹೋಗಿದ್ದರು. ಹಾನಗಲ್ಲ ನ್ಯಾಯಾಲಯದಲ್ಲಿ ಒಟ್ಟು 19 ಮಂದಿ ರೈತರು ಪ್ರಕರಣ ದಾಖಲಿಸಿದ್ದರು. ಇದರಲ್ಲಿ 11 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಪ್ರಕಟಿಸಿದೆ. 

1995ರಲ್ಲಿ ಈ ಗ್ರಾಮಗಳ ಜಮೀನುಗಳನ್ನು ಸರಕಾರ ಭೂಸ್ವಾಧೀನ ಪ್ರಕ್ರಿಯೆಗೊಳಪಡಿಸಿತ್ತು. ಇದಕ್ಕಾಗಿ ಮೊದಲ ಕಂತಿನ ಪರಿಹಾರವಾಗಿ ಸುಮಾರು 20 ಸಾವಿರ ರೂಪಾಯಿ ಬಿಡುಗಡೆಗೊಳಿಸಿತ್ತು. ಹೆಚ್ಚಿನ ಪರಿಹಾರಕ್ಕಾಗಿ ರೈತರು 2001ರಲ್ಲಿ  ಹಾನಗಲ್ಲ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು 2009ರಲ್ಲಿ ರೂ. 23 ಲಕ್ಷಕ್ಕೂ ಅಧಿಕ ಪರಿಹಾರ ನೀಡುವಂತೆ ನ್ಯಾಯಾಲಯ ನೀರಾವರಿ ಇಲಾಖೆಗೆ ಆದೇಶಿಸಿತ್ತು.

ಪರಿಹಾರದ ಹಣ ತುಂಬದೆ ಇದ್ದುದರಿಂದ ನೊಂದ ರೈತರು ಹಣ ವಸೂಲಿಗಾಗಿ ಪ್ರಕರಣ ದಾಖಲಿಸಿದ್ದರು. ಇಲ್ಲಿನ ಏತ ನೀರಾವರಿ ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣ ತುಂಬಲು ವಿಫಲರಾಗಿದ್ದ ಕಾರಣ ಫೆ. 1ರಂದು ನ್ಯಾಯಾಲಯ ಜಪ್ತಿ ಆದೇಶ ಹೊರಡಿಸಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿರದ ಕಾರಣ ಸೋಮವಾರ ಪಿಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಅರ್ಜಿದಾರರ ಪರ ವಕೀಲರಾದ ಎಂ.ಜಿ.ಮೊಟಗಿ ಹಾಗೂ ಸಿ.ಎಂ.    ಸುರಳಿಹಳ್ಳಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.