ADVERTISEMENT

ಪುತ್ರ, ರಕ್ತ ಸಂಬಂಧದ ವ್ಯಾಮೋಹ ಬೇಡ

ರಾಜಕಾರಣಿಗಳು, ಮಠಾಧೀಶರಿಗೆ ದಿಂಗಾಲೇಶ್ವರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 9:43 IST
Last Updated 2 ಜೂನ್ 2018, 9:43 IST

ರಾಣೆಬೆನ್ನೂರು: ‘ರಾಜಕಾರಣಿಗಳು ಮತ್ತು ನಾಡಿನ ಮಠಾಧೀಶರು ತಮ್ಮ ನಂತರ ಪಟ್ಟ ಕಟ್ಟುವಾಗ ಪುತ್ರ ವ್ಯಾಮೋಹ, ರಕ್ತ ಸಂಬಂಧಕ್ಕೆ ಅಂಟಿಕೊಂಡರೆ, ನಾಡು ಅವನತಿಯತ್ತ ಸಾಗುವುದು ಖಚಿತ’ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದರು.

ಇಲ್ಲಿನ ದೊಡ್ಡಪೇಟೆಯ ಪಂಚಾಚಾರ್ಯ ಮಂಗಲ ಮಂದಿರದಲ್ಲಿ ಶುಕ್ರವಾರ ಸಂಜೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಕೈಗೊಂಡಿರುವ ‘ನಮ್ಮ ನಡಿಗೆ ಚನ್ನಮ್ಮನ ನಾಡಿಗೆ’ ಸದ್ಭಾವನಾ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಚಾರ ವಿಚಾರ ಇರುವ ವ್ಯಕ್ತಿಗೆ ಪಟ್ಟ ಕಟ್ಟುವ ಭಾವನೆ ಮಠಾಧೀಶರು ಮತ್ತು ರಾಜಕಾರಣಿಗಳಲ್ಲಿ ಬರಬೇಕು. ಆರೋಗ್ಯ, ಬುದ್ಧಿ ಮತ್ತು ಶಕ್ತಿ ಇದ್ದವರಿಗೆ ಪಟ್ಟ ಕಟ್ಟಬೇಕು. ರಕ್ತ ಸಂಬಂಧಿಗಳಿಗೆ ಪಟ್ಟ ಕಟ್ಟುವುದು ಒಳ್ಳೆ ಬೆಳವಣಿಗೆಯಲ್ಲ. ಎಲ್ಲ ಪಕ್ಷಗಳು, ಮಠಗಳು ಮನೆತನದ ಜಾತಿ, ರಕ್ತಸಂಬಂಧ ಬಿಟ್ಟು ಹೊರಗೆ ಬಂದಾಗ ನಾಡು ಉದ್ಧಾರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರೈತರು ಹೊಲದಲ್ಲಿ ಬೀಜ ಬಿತ್ತಿದಾಗ ಬೆಳೆಗೂ ಮೊದಲು ಕಳೆ ಹುಟ್ಟುತ್ತದೆ. ಅದನ್ನು ಕಿತ್ತು ಹಾಕಿದಾಗ ಬೆಳೆ ಸಮೃದ್ಧಿಯಾಗಿ ಬೆಳೆಯುತ್ತದೆ. ಹಾಗೆಯೇ ಸಮಾಜದ ಕಳೆಯನ್ನು ಕಿತ್ತುಹಾಕಿ ಉತ್ತಮ ಸಮಾಜ ನಿರ್ಮಾಣ ಮಾಡಲು ವಚನಾನಂದ ಸ್ವಾಮೀಜಿ ಮುಂದಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐರಣಿ ಹೊಳೆಮಠದ ಬಸವರಾಜದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆವರಗೊಳ್ಳದ ಓಂ ಕಾರ ಸ್ವಾಮೀಜಿ, ಗಂಗಾಪುರದ ಮರುಳಶಂಕರ ಸ್ವಾಮೀಜಿ ಮಾತನಾಡಿದರು.
ಅಂಕಸಾಪುರ ಸ್ವಾಮೀಜಿ, ಹಡಗಲಿ ಮಹಾಂತ ಸ್ವಾಮೀಜಿ, ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರ, ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಡಾ.ಬಸವರಾಜ ಕೇಲಗಾರ, ಸಿ.ಆರ್‌.ಬಳ್ಳಾರಿ, ಎಸ್‌.ಎಸ್‌.ರಾಮಲಿಂಗಣ್ಣನವರ, ಬಿ.ಎನ್‌.ಪಾಟೀಲ, ಉಮೇಶ ಗುಂಡಗಟ್ಟಿ, ಗೀತಾ ಜಂಬಿಗಿ, ಮಲ್ಲಿಕಾರ್ಜುನ ಅಂಗಡಿ, ಭಾರತಿ ಮಲ್ಲಿಕಾರ್ಜುನ, ಹುಲ್ಲತ್ತಿ, ಪೂರ್ಣಿಮಾ ಬೆನ್ನೂರು. ಭಾರತಿ ಜಂಬಿಗಿ, ಸಿದ್ದು ಚಿಕ್ಕಬಿದರಿ, ಕೆ.ಶಿವಲಿಂಗಪ್ಪ, ಭಾರತಿ ಜಂಬಿಗಿ ಇದ್ದರು.

ಅದ್ಧೂರಿ ಸ್ವಾಗತ

ರಾಣೆಬೆನ್ನೂರು: ‘ನಮ್ಮ ನಡಿಗೆ ಚನ್ನಮ್ಮ ನಾಡಿಗೆ’ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಂಡಿರುವ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಅವರು ಶುಕ್ರವಾರ ಪುರ ಪ್ರವೇಶ ಮಾಡಿದರು.

ಈ ವೇಳೆ, ಪಂಚಮಸಾಲಿ ಸಮಾಜ ಬಾಂಧವರು ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಎಸ್‌ಟಿಜೆಐಟಿ ಎಂಜಿನಿಯರಿಂಗ್‌ ಕಾಲೇಜು ಬಳಿ ಸ್ವಾಮೀಜಿ ಅವರ ಪಾದಯಾತ್ರೆ ಬರುತ್ತಿದ್ದಂತೆ ಯುವಕರು ಬೈಕ್‌ ರ‍್ಯಾಲಿ ನಡೆಸಿದರು. ಸುಮಂಗಲೆಯರು ಪೂರ್ಣ ಕುಂಭ ಹೊತ್ತು, ಆರತಿ ಬೆಳಗಿ ಸ್ವಾಗತಿಸಿದರು.

**
ಸಮಾಜದ ಸಂಘಟನೆ ಮತ್ತು ಬಲವೃದ್ಧಿಗೆ ಪಾದಯಾತ್ರೆ ಸಹಕಾರಿ ಆಗಲಿದೆ ಎಂಬುದು ಸದ್ಭಾವನಾ ಪಾದಯಾತ್ರೆಯ ಉದ್ದೇಶ
- ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.