ADVERTISEMENT

ಬೀಜ, ಗೊಬ್ಬರ ಸಂಗ್ರಹ ಕಾರ್ಯದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:05 IST
Last Updated 3 ಜೂನ್ 2011, 6:05 IST

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಉತ್ತಮ ಆರಂಭವನ್ನು ಒದಗಿಸಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇಷ್ಟರಲ್ಲಿಯೇ ಆರಂಭವಾಗಲಿರುವ ಬಿತ್ತನೆ ಕಾರ್ಯಕ್ಕೆ ಅವಶ್ಯವಿರುವ ಬೀಜ ಹಾಗೂ ಗೊಬ್ಬರ ಸಂಗ್ರಹ ಕಾರ್ಯವೂ ಭರದಿಂದ ಸಾಗಿದೆ.

ಜಿಲ್ಲೆಯ ಕೆಲವಡೆ ರೈತರಿಗೆ ಅವಶ್ಯವಿರುವ ಬೀಜ, ಗೊಬ್ಬರ ಸಿಗುತ್ತಿಲ್ಲ. ಕೆಲವಡೆ ಬೀಜ, ಗೊಬ್ಬರ ಇದ್ದರೂ ಅದನ್ನು ನೀಡುತ್ತಿಲ್ಲ. ಅಗ್ರೋ ಕೇಂದ್ರಗಳ ಮಾಲೀಕರು ಬೀಜ, ಗೊಬ್ಬರದ ಜತೆಗೆ ಕ್ರಿಮಿನಾಶಕಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತವೆ. ತೆಗೆದುಕೊಳ್ಳಲು ನಿರಾಕರಿಸಿದರೆ, ಬೀಜ, ಗೊಬ್ಬರ ಇಲ್ಲ ಎಂದು ಹೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

`ಈಗಾಗಲೇ ಜಿಲ್ಲೆಯಲ್ಲಿ ಅಗತ್ಯ ಬೀಜಗೊಬ್ಬರಗಳ ದಾಸ್ತಾನು ಮಾಡಲಾಗಿದೆ. ಬಿತ್ತನೆಗೆ ಬೇಕಾದ ಗೋವಿನಜೋಳ, ಸೋಯಾಬಿನ್ ಹಾಗೂ ಶೇಂಗಾ ಬೀಜವನ್ನು ಕೃಷಿ ಇಲಾಖೆಯು ಬೀಜ ಮಾರಾಟ ಕೇಂದ್ರಗಳ ಮೂಲಕ ವಿತರಣೆ ಮಾಡುತ್ತಿದೆ. ಅದಕ್ಕಾಗಿ ಜಿಲ್ಲೆಯಾದ್ಯಂತ 60 ಬೀಜ ಪೂರೈಕೆ ಕೇಂದ್ರಗಳನ್ನು ತೆರೆಯಲಾಗಿದೆ~ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪರಾಜು ಪ್ರಜಾವಾಣಿಗೆ ತಿಳಿಸಿದರು.

`ಜಿಲ್ಲೆಯಲ್ಲಿ 48 ಸಾವಿರ ಕ್ವಿಂಟಲ್ ಬೀಜದ ಬೇಡಿಕೆ ಇದ್ದು, ಇದರಲ್ಲಿ 14,515 ಕ್ವಿಂಟಲ್ ಬೀಜದ ಸಂಗ್ರಹವಿದೆ. 22 ಸಾವಿರ ಕ್ವಿಂಟಲ್ ಗೋವಿನಜೋಳ ಬೀಜದ ಅವಶ್ಯಕತೆಯಿದ್ದು, ಅದರಲ್ಲಿ 9710 ಕ್ವಿಂಟಲ್ ಸಂಗ್ರಹವಿದೆ. 374 ಕ್ವಿಂಟಲ್  ಹೈಬ್ರಿಡ್ ಜೋಳದ ಬೇಡಿಕೆಯಿದೆ.

ಅದರಲ್ಲಿ 145 ಕ್ವಿಂಟಲ್ ಈಗಾಗಲೇ ದಾಸ್ತಾನು ಮಾಡಲಾಗಿದೆ. 10,009 ಕ್ವಿಂಟಲ್ ಭತ್ತದ ಬೀಜ ಅಗತ್ಯವಿದ್ದು, ಇದರಲ್ಲಿ ಈಗಾಗಲೇ 1,991 ಕ್ವಿಂಟಲ್ ದಾಸ್ತಾನು ಮಾಡಿಕೊಳ್ಳಲಾಗಿದೆ. 570 ಕ್ವಿಂಟಾಲ್ ತೊಗರೆ ಬೀಜದಲ್ಲಿ 237 ಕ್ವಿಂಟಲ್, 672 ಕ್ವಿಂಟಲ್ ಹೆಸರು ಬೀಜದ ಪೈಕಿ 217 ಕ್ವಿಂಟಲ್, 4,500 ಕ್ವಿಂಟಲ್ ಸೋಯಾಬಿನ್ ಬೀಜದಲ್ಲಿ 1,400 ಕ್ವಿಂಟಲ್ ಬೀಜ ಸಂಗ್ರಹದಲ್ಲಿದೆ. 1,974 ಕ್ವಿಂಟಲ್ ಸೋಯಾಬಿನ್ ಬೀಜದ ಪೈಕಿ 812 ಕ್ವಿಂಟಲ್ ಸಂಗ್ರಹ ಮಾಡಿಕೊಳ್ಳಲಾಗಿದೆ. ಈ ಎಲ್ಲ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ~ ಎಂದು ಅವರು ಹೇಳಿದರು.

`ಕನಕ ಬಿಟಿ ಹತ್ತಿ ಬೀಜದ ಕೊರತೆ ಬಿಟ್ಟರೆ, ಬೇರೆ ಕಂಪೆನಿಗಳ ಬಿಟಿ ಹತ್ತಿ ಬೀಜದ ಕೊರತೆಯಿಲ್ಲ. ಜಿಲ್ಲೆಗೆ 4.84 ಲಕ್ಷ ಪ್ಯಾಕೆಟ್ ಬಿಟಿ ಹತ್ತಿ ಬೀಜದ ಅವಶ್ಯಕತೆಯಿದ್ದು, ಈಗಾಗಲೇ 2.84 ಲಕ್ಷ ಪ್ಯಾಕೆಟ್ ದಾಸ್ತಾನು ಇದ್ದು, ಖಾಸಗಿ ವರ್ತಕರಲ್ಲಿ ಮಾರಾಟ ಮಾಡಲಾಗುತ್ತಿದೆ~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.