ADVERTISEMENT

ಭಕ್ತರ ಹರ್ಷೋದ್ಗಾರ: ‘ಭಂಡಾರ ಸೃಷ್ಟಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:09 IST
Last Updated 10 ಡಿಸೆಂಬರ್ 2013, 5:09 IST

ಹೂವಿನಹಡಗಲಿ: ಐತಿಹಾಸಿಕ  ಸುಪ್ರಸಿದ್ಧ ಮೈಲಾರ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ‘ಭಂಡಾರ ಸೃಷ್ಟಿ’ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯದೈವವಾಗಿರುವ  ಮೈಲಾರಲಿಂಗಸ್ವಾಮಿಯ  ಜಯಂತಿಯ ಪ್ರತೀಕವಾಗಿ ಸುಕ್ಷೇತ್ರದಲ್ಲಿ ಆಚರಿಸುವ  ಭಂಡಾರ ಸೃಷ್ಟಿ ಕಾರ್ಯಕ್ರಮದಲ್ಲಿ  ನಾಡಿನಾದ್ಯಂತ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.

ವಿಶಿಷ್ಟ  ಸಂಪ್ರದಾಯ, ಆಚರಣೆಗಳಿಂದ ಗಮನ ಸೆಳೆದಿರುವ  ಮೈಲಾರ ಸುಕ್ಷೇತ್ರಕ್ಕೆ  ಬೆಳಗ್ಗೆಯಿಂದಲೇ ಭಕ್ತರ ದಂಡು  ಹರಿದು ಬಂದಿತು. ‘ಭಂಡಾರ ಸೃಷ್ಟಿ’ ಕಾರ್ಯಕ್ರಮ ಭಾನುವಾರ ಬಂದಿದ್ದರಿಂದ ಈ ವರ್ಷ  ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ ಅವರು ಸಾಂಪ್ರದಾಯಿಕವಾಗಿ ತಯಾರಿಸಲ್ಪಟ್ಟ  ಭಂಡಾರವನ್ನು  ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಏಳು ಕೋಟಿ ಚಾಂಗಮಲೋ.... ಎನ್ನುವ ಭಕ್ತರ ಜಯಘೋಷ, ಹರ್ಷೋದ್ಗಾರ ನಡುವೆ  ವೆಂಕಪ್ಪಯ್ಯ ಒಡೆಯರ್ ಮೈಲಾರಲಿಂಗಸ್ವಾಮಿಗೆ  ವಿಶೇಷ ಪೂಜೆ  ನೆರವೇರಿಸಿದರು. ನಂತರ  ಮೈಲಾರಲಿಂಗ ಸ್ವಾಮಿಯ  ಉದ್ಭವ ಲಿಂಗ ಭಂಡಾರದಲ್ಲಿ ಲೀನವಾಗುವರೆಗೆ ಭಂಡಾರದಿಂದ ಅರ್ಚನೆ ಮಾಡಲಾಯಿತು.

ಸಂಪ್ರದಾಯಿಕ ಆಚರಣೆಗಳ ವಿಧಿ ವಿಧಾನಗಳನ್ನು ಪೂರೈಸಿ ದೇವಸ್ಥಾನ ಗರ್ಭಗುಡಿಯ ಬಾಗಿಲನ್ನು ಭದ್ರವಾಗಿ ಮುಚ್ಚಲಾಯಿತು.

ಸೋಮವಾರ ಬೆಳಗಿನ ಜಾವ ಬಾಗಿಲು ತೆಗೆದು ಮೈಲಾರಲಿಂಗ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಲಿಂಗುವಿಗೆ ಅರ್ಚನೆಗೈದ ಭಂಡಾರವನ್ನು  ನೆರೆದ  ಭಕ್ತರಿಗೆ ಹಂಚಲಾಗುತ್ತದೆ. ಭಕ್ತರು  ಇದನ್ನು  ಈ ವರ್ಷದ  ಹೊಸ ಭಂಡಾರವೆಂದು ಭಾವಿಸಿ ಧರಿಸುತ್ತಾರೆ.

ಕಾರ್ಯಕ್ರಮದಲ್ಲಿ   ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ, ಬಾಬುದಾರರು, ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.