ರಟ್ಟೀಹಳ್ಳಿ: ಮೇದೂರ ಗ್ರಾಮದಲ್ಲಿ ಶನಿವಾರ ರಾತ್ರಿ ಪ್ರಾರಂಭವಾದ ಐತಿಹಾಸಿಕ ಪ್ರಸಿದ್ಧಿ ಪಡೆದ ಕಾಮದಹನ ಕಾರ್ಯಕ್ರಮ ಭಾನುವಾರ ಬೆಳಗಿನ ಜಾವದವರೆಗೆ ಜರುಗಿತು. ನಂತರ ಕಾಮದಹನ ನಡೆಸಲಾಯಿತು.
ಗ್ರಾಮದಾದ್ಯಂತ ನಡೆದ ಮೆರವಣಿಗೆ ಯಲ್ಲಿ ಸಾವಿರಾರು ಜನರು ಭಾಗಿ ಯಾಗಿದ್ದರು. ಕಾಮದೇವನ ಪ್ರತಿಷ್ಠಾಪನೆ ನಂತರ ಹಣ್ಣುಗಳ ನೈವೇದ್ಯ ಅರ್ಪಿಸಲಾಯಿತು. ಇಡೀ ರಾತ್ರಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಜನರ ಹರ್ಷೋದ್ಘಾರದ ಮಧ್ಯೆ ಕಾಮದಹನ ಜರುಗಿತು.
ಈ ಸಂದರ್ಭದಲ್ಲಿ ಕಾಮದೇವನ ತಲೆ ಉರಿದು ಬೀಳುವ ಸ್ಥಿತಿಗೆ ಅನುಸಾರವಾಗಿ ಭವಿಷ್ಯ ವನ್ನು ಸೂಚಿಸಲಾಗುತ್ತದೆ. ಈ ವರ್ಷ ಕಾಮದೇವನ ತಲೆ ಮುಂಭಾಗದಲ್ಲಿ ಬಿದ್ದಿದೆ.
ಇದು ಈ ವರ್ಷ ಉತ್ತಮ ಮಳೆ, ಬೆಳೆ ಸುಖ ಸಂತೋಷದ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹಿರಿಯರು ಅಭಿಪ್ರಾಯ ಪಟ್ಟರು.
ಕಾಮ ದಹನ ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ಬೂದಿಯ ರಾಶಿ ಹರಡಿದೆ. ಈ ಬೂದಿಯನ್ನು ಗ್ರಾಮಸ್ಥರು ಸಂಗ್ರಹಿಸಿ ಇಡುತ್ತಾರೆ.
ಮಕ್ಕಳಿಗೆ ಆರೋಗ್ಯ ಕೆಟ್ಟರೆ ಹಾಗೂ ದನ ಕರುಗಳು ಅನಾರೋಗ್ಯಕ್ಕೆ ಈಡಾದಾಗ ಇದೇ ಕಾಮದೇವನ ಬೂದಿಯನ್ನು ಉಪಯೋಗಿಸುತ್ತಾರೆ. ಅದರಿಂದ ಗುಣಮುಖರಾಗುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದ ಪದ್ಧತಿಯಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.