ADVERTISEMENT

ಮಕ್ಕಳಿಗೆ ಸತ್ವಯುತ ಆಹಾರ ಕೊಡಿ: ಪ್ರಾಣೇಶ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:00 IST
Last Updated 13 ಡಿಸೆಂಬರ್ 2013, 6:00 IST

ಬ್ಯಾಡಗಿ- : ಮಕ್ಕಳಿಗೆ ಬೇಕರಿಗಳಲ್ಲಿ ದೊರೆಯುವ ಜಂಕ್‌ ಆಹಾರ ಪದಾರ್ಥಗಳನ್ನು ಕೊಡಿಸದೆ, ರೊಟ್ಟಿ, ಚಪಾತಿ ಹಾಗೂ ತರಕಾರಿಗಳಿಂದ ಮನೆಯಲ್ಲಿಯೇ ತಯಾರಿಸಿದ ಸತ್ವಯುತ ಆಹಾರವನ್ನು ನೀಡುವಂತೆ ಗಂಗಾವತಿ ಬೀಚಿ ಎಂದೇ ಪ್ರಖ್ಯಾತಿಯನ್ನು ಹೊಂದಿದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಜನತೆಯಲ್ಲಿ ಮನವಿ ಮಾಡಿಕೊಂಡರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಆಕ್ಸಿಜೆನ್‌ ಹೆಲ್ತ್‌ ಕೇರ್‌ ಹಾಗೂ ಮೆಣಸಿನಕಾಯಿ ವರ್ತಕರ ಸಂಘ  ಏರ್ಪಡಿಸಿದ್ದ ‘ಆರೋಗ್ಯಕ್ಕಾಗಿ ಹಾಸ್ಯ‘ ಕಾರ್ಯಕ್ರಮದಲ್ಲಿ ಹೆಲ್ತ್‌ ಆಯಿಲ್‌ ಹಾಗೂ ಗ್ರೀನ್‌ ಟೀ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಂಕ್‌ ಆಹಾರಗಳು ಮಕ್ಕಳ ಆರೋಗ್ಯ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿದ್ದು, ಬಹಳಷ್ಟು ಜನರು ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ದಿನನಿತ್ಯ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು. ರಾಜ್ಯದ ಜನತೆಯ ಅಭಿಮಾನ ಹಾಗೂ ಸಹಕಾರದಿಂದ ಹಾಸ್ಯ ಕಲಾವಿದನಾಗಿ ಬೆಳೆದಿದ್ದು, ಈಗ ವಾಣಿಜ್ಯ ಕ್ಷೇತ್ರದಲ್ಲಿ ಪದಾರ್ಪಣೆ ಮಾಡುವಂತಾಗಿದೆ ಎಂದರು. ಮೆಣಸಿನಕಾಯಿ ಉದ್ಯಮಿ ಹಾಗೂ ಹುಬ್ಬಳ್ಳಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಗದೀಶಗೌಡ್ರ ಮಾತನಾಡಿ, ದಿನನಿತ್ಯ ವಾಯು ವಿಹಾರ ಹಾಗೂ ವ್ಯಾಯಾಮಗಳನ್ನು ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗಲು ಸಾಧ್ಯವಿದೆ.

ಸತ್ವವಿಲ್ಲದ ಆಹಾರ ಹಾಗೂ ಆಲಸ್ಯದಿಂದ ಅನೇಕ ರೋಗಗಳು ಬರುತ್ತಿವೆ. ಹೀಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಹೋದಲ್ಲಿ 2020ರ ವೇಳೆಗೆ ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಮಧುಮೇಹದಿಂದ ಬಳಲಬಹುದು ಎನು್ನವ ಮಾತು ಕೇಳಿಬಂದಿದೆ ಎಂದರು.  

ಯುವ ವಿಜ್ಞಾನಿ ಡಾ.ಪ್ರವೀಣ ಜೇಕಬ್ ಮಾತನಾಡಿ, ಈಗ ಶೇ 26ರಷ್ಟು ಜನರಲ್ಲಿ ಮಧುಮೇಹ ಕಾಣಿಸಿಕೊಂಡಿದ್ದು, ಅವರಲ್ಲಿ ಶೇ 60 ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಕಡಿಮೆ ಕೋಲೆಸ್ಟ್ರಾಲ್‌ ಹೊಂದಿರುವ ಭತ್ತದ ತೌಡಿನಿಂದ ತಯಾರಿಸಿದ ಅಡುಗೆ ಎಣ್ಣೆಯನ್ನು ಬಳಸುವಂತೆ ಅವರು  ಸಲಹೆ ನೀಡಿದರು. 

ಮೆಣಸಿನಕಾಯಿ ವರ್ತಕರ ಸಂಘದ ಉಪಾಧ್ಯಕ್ಷ ಪುಂಡಲೀಕಪ್ಪ ನವಲೆ, ಜಂಟಿ ಕಾರ್ಯದರ್ಶಿ ಎಂ.ಜೆ.ಪಾಟೀಲ, ಅಗ್ರೊ ಟೆಕ್‌ನ ಎ.ಕೆ, ಪ್ರಶಾಂತ, ಸಾವನ ಅಂಬರಕರ, ಶಿರಸಿ ನಿಸರ್ಗ ಚಿಕಿತ್ಸಾಲಯ ಸಂಸ್ಥಾಪಕ ಅಧ್ಯಕ್ಷ ಡಾ.ವೆಂಕಟ್ರಮಣ ಹೆಗಡೆ, ಹಾಸ್ಯ ಸಹಕಲಾವಿದರಾದ ಬಸವರಾಜ ಮಾಹಾಮನಿ ಹಾಗೂ ನರಸಿಂಹ ಜೋಶಿ ಉಪಸ್ಥಿತರಿದ್ದರು. ಯೋಗ ವಿಭಾಗದ ಮಂಜುನಾಥ ಹೆಗಡೆ ಪ್ರಾರ್ಥಿಸಿದರು. ಮಂಜುನಾಥ ಕಡುಗನಕಟ್ಟೆ ಸ್ವಾಗತಿಸಿದರು. ವಿ.ಎಸ್‌ಮೋರಿಗೇರಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.