ADVERTISEMENT

ಮತದಾರರ ‘ಮತ’ಕ್ಕೆ ತಕ್ಕಂತೆ ಮತಬೇಟೆ!

ಶಿಗ್ಗಾವಿ–ಸವಣೂರಿನಲ್ಲಿ ಈಗ ಬಿಗ್ ಫೈಟ್; ಸ್ಥಳೀಯ ಮುಖಂಡರ ಜತೆ ರಹಸ್ಯ ಚರ್ಚೆ, ಸಭೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:06 IST
Last Updated 8 ಮೇ 2018, 13:06 IST
ಮತದಾರರ ‘ಮತ’ಕ್ಕೆ ತಕ್ಕಂತೆ ಮತಬೇಟೆ!
ಮತದಾರರ ‘ಮತ’ಕ್ಕೆ ತಕ್ಕಂತೆ ಮತಬೇಟೆ!   

ಹಾವೇರಿ: ಬಿಸಿಲಿನ ಝಳ ತೀವ್ರವಾಗಿದ್ದು, ಮೋತಿ ತಲಾಬ್ ಸೇರಿದಂತೆ ಹಲವಾರು ಕೆರೆಗಳು ಬತ್ತಿ ಭಣಗುಟ್ಟುತ್ತಿವೆ. ಆದರೆ, ಕ್ಷೇತ್ರದಲ್ಲಿ ಮಾತ್ರ ಪ್ರತಿನಿತ್ಯವೂ ಅಬ್ಬರ. ಮನೆ ಮನೆಗಳಿಗೆ ಮುಖಂಡರ ಭೇಟಿ. ‘ಇವ ನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ...’ ಎಂಬ ಮನವಿ. ಅದೂ,ಆಯಾ ಮತದಾರರ ಸಮಾಜದವರನ್ನು ಕರೆಯಿಸಿಕೊಂಡು ಮನವೊಲಿಸುವ ಕಸರತ್ತು. ಸ್ಥಳೀಯ ಮುಖಂಡರ ಜೊತೆ ಅಲ್ಲಲ್ಲಿ ರಹಸ್ಯ ಚರ್ಚೆಗಳು.ಇದು ಶಿಗ್ಗಾವಿ–ಸವಣೂರ ಕ್ಷೇತ್ರದ ಚುನಾವಣಾ ಕಣದಲ್ಲಿ ಕಂಡು ಬರುವ ಚಿತ್ರಣ.

ಕಳೆದ ಬಾರಿಯ (2013) ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯ ಅಲೆ ಮುಂದೆ ಭರ್ಜರಿಯಾಗಿಯೇ ಈಜಿ ದಡ ಸೇರಿದ್ದ ಶಾಸಕ ಬಸವರಾಜ ಬೊಮ್ಮಾಯಿಗೆ ಅಂದು ಜೋಡಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಈಗ ಪ್ರತಿಸ್ಪರ್ಧಿಯಾಗಿದ್ದಾರೆ. ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಬೊಮ್ಮಾಯಿ ಹ್ಯಾಟ್ರಿಕ್ ಪ್ರಯತ್ನದಲ್ಲಿದ್ದರೆ, ಬೇವಿನಮರದ ಪಕ್ಷೇತರರಾಗಿ ಸ್ಪರ್ಧೆಯೊಡ್ಡಿದ್ದಾರೆ. ಹೀಗಾಗಿಯೇ, ಕ್ಷೇತ್ರದಲ್ಲಿ ಕಸರತ್ತು ತೀವ್ರಗೊಂಡಿದೆ.

ಅತ್ತ ಹ್ಯಾಟ್ರಿಕ್ ಸೋಲು ಕಂಡ ಅಜ್ಜಂಪೀರ್ ಖಾದ್ರಿ ಅನುಕಂಪ ಮತ್ತು ಪಕ್ಷದ ವೋಟ್‌ ಬ್ಯಾಂಕ್ ಮೂಲಕ ಗೆಲುವಿನ ನಗೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ‘ನಾನು ಬಂಕಾಪುರದ ಗಂಡು’ ಎನ್ನುವ ಅಶೋಕ ಬೇವಿನಮರ ಜೆಡಿಎಸ್ ಅಭ್ಯರ್ಥಿ. ಅವರಿಗೆ ರೈತರ ಹಾಗೂ ಬಿಎಸ್ಪಿ ಬೆಂಬಲಿತ ಪರಿಶಿಷ್ಟರ ಮತದ ಮೇಲೆ ಕಣ್ಣು. ಉಳಿದಂತೆ, ಕಣದಲ್ಲಿರುವ ಕೆಲವು ಅಭ್ಯರ್ಥಿಗಳು ವೋಟು ಒಡೆಯಲು ಬಂದಿದ್ದಾರೆ ಎಂಬುದು ಅವರ ಪ್ರತಿಸ್ಪರ್ಧಿಗಳ ಆರೋಪ.

ADVERTISEMENT

ಇಲ್ಲಿನ ಪೈಪೋಟಿಯ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷದ ಕೈಗನ್ನಡಿಯಂತಿದೆ. ಕೆಜೆಪಿ ರಚನೆಯಾದ ಸಂದರ್ಭದಲ್ಲಿ ಬಿಜೆಪಿ ನೆಲೆ ಗಟ್ಟಿಗೊಳಿಸಲು ಶ್ರಮಿಸಿದ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶ ಆಯೋಜನೆಯ ನೇತೃತ್ವವಹಿಸಿದ ಬೇವಿನಮರದ ಈ ಬಾರಿ ಬಂಡಾಯವೆದ್ದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಆಪ್ತ ಬಳಗದಲ್ಲಿದ್ದರೂ ಕೆ.ಜೆ.ಪಿಗೆ ಹೋಗದೇ, ಮತ್ತೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಮಾಡಲು ಹೊರಟ ಬೊಮ್ಮಾಯಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಇವರಿಬ್ಬರ ಸಂಘರ್ಷದ ಹಿಂದೆ ಬಿಜೆಪಿ ರಾಜ್ಯ ವರಿಷ್ಠರ ಆಶೀರ್ವಾದ ಇದೆ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು.

ಲಿಂಗಾಯತರೊಳಗಿನ ಪಂಚಮಸಾಲಿ ಮತ್ತು ಸಾದರ ಒಳಪಂಗಡಗಳ ಮತಗಳ ವಿಭಜನೆ, ಅಲ್ಪಸಂಖ್ಯಾತ ಮತ್ತು ಇತರ ಪರಿಶಿಷ್ಟರ ಮತಗಳ ಕ್ರೋಡೀಕರಣ, ಬ್ರಾಹ್ಮಣ, ವಿಶ್ವಕರ್ಮ ಮತ್ತಿತರ ಸಣ್ಣ ಮತಬ್ಯಾಂಕ್‌ಗಳ ರಕ್ಷಣೆ ಮತ್ತಿತರ ಚರ್ಚೆಗಳು ಜೋರಾಗಿ ಕೇಳಿಬಂದಿದ್ದು, ಕುರುಬರ ಮತಗಳು ನಿರ್ಣಾಯಕ ಎಂಬುದು ಕ್ಷೇತ್ರದ ಹಿರಿಯೊಬ್ಬರ ಅಭಿಪ್ರಾಯ.

ಅಲ್ಪಸಂಖ್ಯಾತ ಮತಕ್ಕೆ ಕಣ್ಣಿಟ್ಟವರು ಬಂಕಾಪುರ, ಸವಣೂರ, ತಡಸ, ಹುಲಗೂರ ಭಾಗದಲ್ಲಿ ಓಡಾಡುತ್ತಿದ್ದರೆ,
ಸವಣೂರ ಮನ್ನಂಗಿ, ತಡಸ, ದುಂಡಸಿ ಯಲ್ಲಿ ಬಿಜೆಪಿ ಬುತ್ತಿ ಭದ್ರಪಡಿಸಲು ಯತ್ನ ಸಾಗಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಕಳೆದ ಜಿಲ್ಲಾ ಪಂಚಾಯ್ತಿ ಚುನಾವಣೆಯ ಬಳಿಕ ಸಕ್ರಿಯಗೊಂಡಿರುವ ಅಜ್ಜಂಪೀರ್ ಖಾದ್ರಿ ಅತಿ ಹೆಚ್ಚು ಗುಡಿಗುಂಡಾರ ಸುತ್ತಿದ್ದಾರೆ. ಜಾತ್ರೆ, ಗಣೇಶೋತ್ಸವ, ರಥೋತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಶಿಗ್ಗಾವಿ ಏತ ನೀರಾವರಿ, ಕೆರೆ ತುಂಬುವ ಯೋಜನೆಗಳು, ಸವಣೂರ ಏತ ನೀರಾವರಿ, ಚಂದಾಪುರ ಪವನ ವಿದ್ಯುತ್, ಗ್ರಾಮೀಣ ರಸ್ತೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಅಭಿವೃದ್ಧಿ ಶ್ರೀರಕ್ಷೆಯಾಗುವ ಭರವಸೆಯಲ್ಲಿ ಬೊಮ್ಮಾಯಿ ಇದ್ದಾರೆ.

ವಿರೂಪಾಕ್ಷಪ್ಪ ಸಿಂಧೂರ ಅವರು ಪಕ್ಷೇತರ ಅಭ್ಯರ್ಥಿ ಬೇವಿನಮರದ ಅವರನ್ನು ಬೆಂಬಲಿಸಿದ್ದಾರೆ. ಬೊಮ್ಮಾಯಿ ವಿರುದ್ಧ ಸೆಡ್ಡು ಹೊಡೆದಿದ್ದ, ರಾಜಶೇಖರ ಸಿಂಧೂರ ತಟಸ್ಥರಾದರೆ, ಶ್ರೀಕಾಂತ ದುಂಡಿಗೌಡ್ರ ಬಿಜೆಪಿಗೆ ಬಂದಿದ್ದಾರೆ. ಪಕ್ಷೇತರ ಅಭ್ಯರ್ಥಿ ದುದ್ದು ಸಾಬ್ ಕನವಳ್ಳಿ ತೆಗ್ಗಿಹಳ್ಳಿಯವರು, ಪಠಾಣ ಮತ್ತಿತರ ಪಕ್ಷೇತರರು ಯಾರ ಮತಬುಟ್ಟಿಗೆ ಕನ್ನ ಹಾಕುತ್ತಾರೆ ಎಂಬುದೂ ಮುಖ್ಯವಾಗಿದೆ.ಇತ್ತ ಮಂಜುನಾಥ ಕುನ್ನೂರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಹುತೇಕ ಅಭ್ಯರ್ಥಿಗಳು ತಮ್ಮ ಕುಟುಂಬ ಹಾಗೂ ಸಂಬಂಧಿಕರನ್ನು ಕರೆದುಕೊಂಡು ಪ್ರಚಾರ ಮಾಡಿಸುತ್ತಿದ್ದಾರೆ.

‘ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಇನ್ನಷ್ಟು ಅಭಿವೃದ್ಧಿ ಆಗಬೇಕು. ಜನ ಅಭಿವೃದ್ಧಿ ಕುರಿತು ಹೆಚ್ಚು ಚಿಂತನೆ ಮಾಡುತ್ತಾರೆ. ಆದರೆ, ಈಗ ಜನ ಹೆಂಗೆಂಗೆ ಬದಲಾಗುತ್ತಾರೆ ಎಂದು ಹೇಳಲು ಬರುವುದಿಲ್ಲ’ ಎಂದು ಬಸವರಾಜ ವಳಗೇರಿ ತಿಳಿಸಿದರು.

ಬಸವರಾಜ ಬೊಮ್ಮಾಯಿ ಕೆಲಸದ ಬಗ್ಗೆ ಜನರಿಗೆ ತೃಪ್ತಿ ಇದೆ. ಆದರೆ, ಇನ್ನಷ್ಟು ಕೆಲಸ ಆಗಬೇಕು. ಅಲ್ಲದೇ, ನೀರಾವರಿಗೆ ಆದ್ಯತೆ ಸಿಗಬೇಕು. ಕಳೆದ ಹತ್ತು ವರ್ಷಗಳಲ್ಲಿ ಕೆಲಸವೂ ಆಗಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಫೈಟ್ ಬೀಳುವ ಸಾಧ್ಯತೆ ಇದೆ ಎಂದು ಹೋತನಹಳ್ಳಿ ಶಂಬಣ್ಣ ಅಕ್ಕಿ ಹೇಳಿದರು.

ಕಣದಲ್ಲಿ ಇರುವ ಅಭ್ಯರ್ಥಿಗಳು
1. ಅಶೋಕ ಬೇವಿನಮರ –ಜೆಡಿಎಸ್‌
2. ಬಸವರಾಜ ಬೊಮ್ಮಾಯಿ –ಬಿಜೆಪಿ
3. ಸೈಯದ್‌ ಅಜ್ಜಂಪೀರ್‌ ಖಾದ್ರಿ –ಕಾಂಗ್ರೆಸ್‌
4. ಮೈನೋದಿನ್‌ ಖತೀಬ –ಎಂಇಪಿ
5. ಹಾತಿವಾಲೆ ಸಿಕಂದರ್ –ಪ್ರಜಾ ಪರಿವರ್ತನಾ ಪಾರ್ಟಿ
6. ಶಿವಪ್ಪ ಯಲ್ಲಪ್ಪ ಕಬ್ಬೂರ –ಪಕ್ಷೇತರ
7. ದುದ್ದುಸಾಬ ಕನವಳ್ಳಿ –ಪಕ್ಷೇತರ
8. ಮೆಹಬೂಬ ಪಠಾಣ –ಪಕ್ಷೇತರ
9. ಪರಮೇಶಿ ನಾಗಪ್ಪ ಶೆಟ್ಟಿಬಾರ –ಪಕ್ಷೇತರ
10. ಸೋಮಣ್ಣ ಬೇವಿನಮರದ –ಪಕ್ಷೇತರ
11. ಮೋಹನ ಇಟ್ಟಣಗಿ –ಪಕ್ಷೇತರ
12. ಸುನೀಲ್‌ ಜೆ.ಎ. –ಪಕ್ಷೇತರ

ಒಟ್ಟು ಮತದಾರರು 2,09,526

ಪುರುಷರು– 1,09, 443

ಮಹಿಳೆಯರು–1,00,083

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.