ADVERTISEMENT

ಮಾತಿನಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 6:15 IST
Last Updated 19 ನವೆಂಬರ್ 2011, 6:15 IST
ಮಾತಿನಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ
ಮಾತಿನಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ   

ಹಾನಗಲ್: `ಸಮಾಜವನ್ನು ತಿದ್ದುವ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕು. ಬರೀ ಮಾತನಾಡುವುದನ್ನು ನಿಲ್ಲಿಸಿ. ಕ್ರಿಯಾಶೀಲತೆಗೆ ಪಣತೊಡಬೇಕಿದೆ. ಸಾಹಿತ್ಯದ ಹೊಸ ಮನಸ್ಸುಗಳನ್ನು ಹುರಿ ಗೊಳಿಸಿ ಪ್ರೋತ್ಸಾಹಿಸುವ ಯೋಜನೆ ರೂಪಿಸಬೇಕಾದ ತುರ್ತು ಅಗತ್ಯತೆ ಯಿದೆ ಎಂದು ಹಾನಗಲ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಸಾಹಿತಿ ವಿಜಯಕಾಂತ ಪಾಟೀಲ ಹೇಳಿದರು.

ಹಾನಗಲ್ ತಾಲ್ಲೂಕಿನ ಕ್ಯಾಸನೂರಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಿಆಲೂರು ಗ್ರಾಮೀಣ ಘಟಕದ ಪದಾಧಿಕಾರಿಗಳು ಸಮ್ಮೇಳನಕ್ಕೆ ಅಧೀ ಕೃತ ಆಹ್ವಾನ ನೀಡಿ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಹಿರಿಮೆಯನ್ನು ಉಳ್ಳದ್ದಾಗಿದ್ದು, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯದೇ ಅನಾಥವಾಗಿರುವುದು ಜಿಲ್ಲೆಯ ದುರ್ದೈವ.
 
79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುವ ಮೂಲಕ ಇಲ್ಲಿನ ಶ್ರೀಮಂತ ಸಾಹಿತ್ಯಕ್ಕೆ ಗೌರವ ನೀಡುವ ಕೆಲಸ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯಬೇಕು ಎಂದರು.
 
ಹಾವೇರಿ ಜಿಲ್ಲೆ ಸಾಂಸ್ಕೃತಿಕ ಹಿರಿತನದ ಜೊತೆಗೆ ಅತಿ ಹೆಚ್ಚು ದಾರ್ಶನಿಕರು ಸಾಹಿತ್ಯ ಚರಿತ್ರೆಗೆ ಕೊಡುಗೆ ನೀಡಿರು ವುದು ಇಲ್ಲಿನ ಹೆಮ್ಮೆ. ಆದರೆ ಹಾವೇರಿ ಯಂತಹ ಜಿಲ್ಲೆಯಲ್ಲಿ ಒಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಈವರೆಗೆ ನಡೆಯದೇ ಇರುವುದು ಸಾಹಿತ್ಯ, ಸಾಂಸ್ಕೃತಿಕ ವಲಯವನ್ನು ನಿರಾಶೆಗೊಳಿ ಸಿದೆ ಎಂದು ಪಾಟೀಲ ಖೇದದಿಂದ ನುಡಿದರು.

ಕವಿ ಮತ್ತು ಯೋಧ ಸಮಾಜಮುಖಿ ಯಾದವರು. ಸಾಹಿತ್ಯ ಸಮಾಜಮುಖಿ ನಿಲುವಿದ್ದರೆ ಮಾತ್ರ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ. ಸಾಹಿತ್ಯವನ್ನು ಬೆಳೆಸಲು ಪ್ರಾಮಾಣಿಕ ಪಣತೊಡುವ ಅವಶ್ಯಕತೆ ಇದೆ. ಕಾವ್ಯ ಧ್ಯಾನವಾಗ ಬೇಕು. ಸಾಹಿತಿಗಳ ಕನಸು ನನಸಾಗಲು ಸರ್ಕಾರ ಸಹಕರಿಸಬೇಕು.

ಸಾಹಿತ್ಯ ಪ್ರಗತಿಪರವಾಗಿ ಮುನ್ನೆಡೆಯಬೇಕು. ಪ್ರತಿಗಾಮಿತನ ಪುಷ್ಠಿಗೊಳಿಸುವ ಸಾಹಿತ್ಯ ಈ ನಾಡಿಗೆ ಮಾರಕವಾಗಿರುವಂತ ಹದ್ದು. ಹಾವೇರಿ ಜಿಲ್ಲೆ ಅದರಲ್ಲೂ ಹಾನಗಲ್ ತಾಲ್ಲೂಕಿನಲ್ಲಿ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು, ಇಂತಹ ದೊಂದು ಪುನರುತ್ಥಾನಕ್ಕೆ ನಾಂದಿ ಹಾಡಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಹಾವೇರಿ ಜಿಲ್ಲೆಯ ತುಂಬ ಈಗ ಕನ್ನಡದ ಸಂಭ್ರಮ. ನಿರಂತರ ಸಾಹಿತ್ಯ ಚಟುವಟಿಕೆಗಳು ಲೇಖಕರಿಗೆ ಪ್ರೋತ್ಸಾಹ ಸಾಹಿತ್ಯ ಸಮ್ಮೇಳನಗಳು, ವಿದ್ಯಾರ್ಥಿ ಸಾಹಿತ್ಯ ಗೋಷ್ಠಿ, ಮಕ್ಕಳ ಸಾಹಿತ್ಯ ಗೋಷ್ಠಿ, ಲೇಖಕರ ಪರಿಚಯ ಪ್ರೋತ್ಸಾಹದ ಹಲವು ಹಾದಿಯಲ್ಲಿ ಹಾವೇರಿ ಜಿಲ್ಲೆ ಮುನ್ನೆಡೆಯುತ್ತಿದೆ. ಈಗ ಹೊಸ ಹೊಸ ಲೇಖಕರು ಬೆಳಕಿಗೆ ಬರು ತ್ತಿದ್ದಾರೆ.

ಅಂತಹವರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸುವ ಕೆಲಸ ಇನ್ನೂ ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಪ್ರಭು ಗುರಪ್ಪನವರ ಮಾತನಾಡಿದರು.

ಕಸಾಪ ತಾಲ್ಲೂಕು ಕಾರ್ಯಧ್ಯಕ್ಷ ಗಿರೀಶ ದೇಶಪಾಂಡೆ, ಅಕ್ಕಿ-ಆಲೂರು ಗ್ರಾಮೀಣ ಘಟಕಾಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಹಾನಗಲ್ ನಗರಾಧ್ಯಕ್ಷ ಜಿ.ಎಂ.ಕುಲಕರ್ಣಿ, ಪದಾಧಿಕಾರಿಗಳಾದ ನಾಗರಾಜ ಅಡಿಗ, ನಾಗರಾಜ ಪಾವಲಿ ಇನ್ನಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.