ADVERTISEMENT

ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 7:40 IST
Last Updated 15 ಫೆಬ್ರುವರಿ 2012, 7:40 IST

ರಾಣೆಬೆನ್ನೂರು: ಬೇಸಿಗೆ ಪ್ರಾರಂಭವಾಗಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಾಂತಿ ಭೇದಿ ಪ್ರಕರಣಗಳು ಕಂಡು ಬರದಂತೆ ಎಚ್ಚರಿಕೆ ವಹಿಸಬೇಕೆಂದು ತಾಪಂ ಪ್ರಭಾರ ಅಧ್ಯಕ್ಷೆ ಗೀತಾ ಮುಂದಿನಮನಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ಕೇವಲ ಲೆಕ್ಕ ಪತ್ರ ವಿವರಣೆ ತೋರಿಸಿದರೆ ಸಾಲದು, ಸರ್ಕಾರ ಯೋಜನೆಗಳು ಗ್ರಾಮೀಣ ಬಡವರಿಗೆ ಸಿಗುವಂತೆ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಾ ಲಮಾಣಿ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳನ್ನು     ಅನುಷ್ಠಾನ ಮಾಡುವಾಗ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಬಾರದು, ಎಲ್ಲ ಕಾರ್ಯಕ್ರಮಗಳಿಗೂ ಆಹ್ವಾನ ನೀಡಬೇಕು ಎಂದು ತಿಳಿಸಿದರು.


ನಗರದ ರಾಜರಾಜೇಶ್ವರಿ ಕಾಲೇಜಿನ ಹಿಂಭಾಗದಲ್ಲಿರುವ ಮಹಿಳಾ ವಸತಿ ನಿಲಯದಲ್ಲಿ ಶೌಚಾಲಯ ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದೆ, ಕೊಳೆತ ತರಕಾರಿ ಅಡುಗೆಗೆ ಬಳಸುತ್ತಾರೆ, ವಾರಕ್ಕೊಮ್ಮೆ ಅದೂ ಸಂಜೆ 7 ಗಂಟೆ ನಂತರ ತರಕಾರಿ ಖರೀದಿಸುತ್ತಾರೆ, ಸಂಜೆ ಮೊದಲು ತರಕಾರಿ ತಾಜಾ ಇರುತ್ತದೆಯೇ? ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಅವರನ್ನು ತರಾಟೆಗೆ ತೆಗೆದುಕೊಂಡರು.

`ಎಷ್ಟು ದಿನಕ್ಕೊಮ್ಮೆ  ವಸತಿ ನಿಲಯಗಳಿಗೆ ಭೇಟಿ ನೀಡುತ್ತೀರಿ?~ ಎಂದು ಪ್ರಶ್ನಿಸಿದಾಗ ಮಂಜುನಾಥ ಅವರು, `ಪ್ರತಿ ವಾರ ಎರಡು ದಿನಕ್ಕೊಮ್ಮೆ ಭೇಟಿ ಮಾಡುತ್ತೇವೆ~ ಎಂದಾಗ `ರಾಜೇಶ್ವರಿ ಮಹಿಳಾ ವಸತಿ ನಿಲಯಕ್ಕೆ ಯಾವಾಗ ಭೇಟಿ ನೀಡಿದ್ದೀರಿ?~ ಎಂದು ಶಾರದಾ ಲಮಾಣಿ ಪ್ರಶ್ನಿಸಿದಾಗ ಅಧಿಕಾರಿ `ಅದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ, ಬಿಸಿಎಂ ವಿಭಾಗಕ್ಕೆ ಬರುತ್ತದೆ~ ಎಂದು ನುಣುಚಿ ಕೊಂಡರು.

`ನೀವೇ ಕಳೆದ ವಾರ ಹಾಸ್ಟೇಲ್ ಭೇಟಿಗೆ ಹೋದಾಗ ಕೊಳೆತ ಮುಳುಗಾಯಿ ಬಳಸಬೇಡಿ ಎಂದು ಹೇಳಿ ಬಂದಿದ್ದೀರಿ ಹೌದಾ?~ ಎಂದು ಅಧ್ಯಕ್ಷರು ಕೇಳಿದಾಗ ಅಧಿಕಾರಿ ಕಸಿವಿಸಿಗೊಂಡರು.ನಂತರ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು. ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಬಿ.ದೇವೂರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT