ಹಾವೇರಿ: `ರೈತರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರ ರೂಪಿಸಿರುವ ಬೃಹತ್ ತುಂತುರು ನೀರಾವರಿ ಯೋಜನೆ ಕಡಿಮೆ ನೀರಿನಲ್ಲಿ ಬೇಸಾಯ ಮಾಡಲು ಹಾಗೂ ಭೂಮಿಯ ಸಾರ ಉಳಿಸಲು ಹೆಚ್ಚು ಪ್ರಯೋಜನಕಾರಿ~ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಈ ಯೋಜನೆಯನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುತ್ತಿರುವುದು ಹೆಮ್ಮೆಯ ಸಂಗತಿ. ಯೋಜನೆಯನ್ನು ನ. 9ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
238 ಕೋಟಿ ರೂ.ಗಳ ತುಂತುರು ನೀರಾವರಿ ಸೌಲಭ್ಯ ಕಲ್ಪಿಸುವ ಶಿಗ್ಗಾವಿ ಏತ ನೀರಾವರಿ ಯೋಜನೆಯಿಂದ 24,463 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಎರಡು ವರ್ಷಗಳವರೆಗೆ ಗುತ್ತಿಗೆ ಪಡೆದ ಕಂಪೆನಿ ಈ ಯೋಜನೆ ನಿರ್ವಹಿಸಲಿದೆ. ಎಕ್ಸ್‌ಪ್ರೆಕ್ಸ್ ಲೈನ್‌ನಿಂದ ವಿದ್ಯುತ್ ಸಂಪರ್ಕ ಪಡೆದಿರುವುದರಿಂದ ಯೋಜನೆಗೆ ನಿರಂತರ ಸಂಪರ್ಕ ದೊರೆಯಲಿದೆ. ಇದಕ್ಕೆ ಪೂರಕವಾಗಿ ಹೆಚ್ಚುವರಿ ಐದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೋಲಾರ್ ಪಾರ್ಕ್ ನಿರ್ಮಿಸಲಾಗುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಮೈಕ್ರೊ ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯ ಬರಲಿದೆ. ರಾಜ್ಯದಲ್ಲಿಯೂ ಇದೇ ಮಾದರಿಯ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಬಾಗಲಕೋಟೆ ಜಿಲ್ಲೆಯ ಮರೋಳ ಏತ ನೀರಾವರಿಯಲ್ಲಿ ಸುಮಾರು 60 ಸಾವಿರ ಎಕರೆ ಜಮೀನಿಗೆ ಹನಿ ನೀರಾವರಿ ಒದಗಿಸಲಾಗುತ್ತದೆ. ಅದೇ ರೀತಿ ಸಿಂಗಟಾಲೂರು, ಕೊಪ್ಪಳ, ಹೇಮಾವತಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ನೂತನ ಮನೆ: ವಾಜಪೇಯಿ ನಗರ ವಸತಿ ಯೋಜನೆ ಮಾರ್ಪಾಡು ಮಾಡಿ, ಮಲೇಷ್ಯಾ ತಂತ್ರಜ್ಞಾನದಲ್ಲಿ 3,223 ಮನೆಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ನ. 9 ರಂದು ಬೆಳಗ್ಗೆ 10.30 ಗಂಟೆಗೆ ಬಂಕಾಪುರದ ಆಶ್ರಯ ಬಡಾವಣೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.