ADVERTISEMENT

`ಯುವರಾಜ'ನ ಆಗಮನಕ್ಕೆ ನಗರ ಸಜ್ಜು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:48 IST
Last Updated 26 ಏಪ್ರಿಲ್ 2013, 6:48 IST

ಹಾವೇರಿ: ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಯುವರಾಜ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಏ. 26 ರಂದು ಬೆಳಗ್ಗೆ 10.30ಕ್ಕೆ ನಗರಕ್ಕೆ ಆಗಮಿಸಲಿದ್ದು, ಅದಕ್ಕಾಗಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ ಸಜ್ಜಗೊಂಡಿದೆ.

2013ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಅವರು, ಜಿಲ್ಲೆಯ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ ಗಾಂಧಿ ಜತೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೋಟ್ಲ ಸೂರ್ಯಪ್ರಕಾಶ ರೆಡ್ಡಿ, ಕಾಂಗ್ರೆಸ್ ಪಕ್ಷದ ಮಧೂಸೂಧನ್ ಮಿಸ್ತ್ರಿ, ಪಕ್ಷದ ರಾಜ್ಯ ಮುಖಂಡರಾದ ಸಿದ್ಧರಾಮಯ್ಯ, ಜಿ. ಪರಮೇಶ್ವರ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

ಪೊಲೀಸ್ ಬಂದೋಬಸ್ತ್: ರಾಹುಲ್‌ಗಾಂಧಿ ಆಗಮನದ ಹಿನ್ನೆಲೆಯಲ್ಲಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಸುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮೂರು ದಿನಗಳ ಹಿಂದೆಯೇ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸ್ ಇಲಾಖೆ ಯಾವುದೇ ವ್ಯಕ್ತಿಯನ್ನು ಒಳಗೆ ಪ್ರವೇಶಿಸದಂತೆ ಹದ್ದಿನ ಕಣ್ಣು ನೆಟ್ಟಿದೆ. ಕೇವಲ ಮೈದಾನದ ಸುತ್ತ ಅಷ್ಟೇ ಅಲ್ಲದೇ ಹಾವೇರಿ ನಗರದ ಮೂಲೆ ಮೂಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್ ರಾಥೋರ್ ತಿಳಿಸಿದ್ದಾರೆ.

ಯುವರಾಜ ಬಹಿರಂಗ ಭಾಷಣಕ್ಕಾಗಿ ಮುನ್ಸಿಪಲ್ ಮೈದಾನದಲ್ಲಿ ಚಿಕ್ಕ ಹಾಗೂ ಎತ್ತರದ ವೇದಿಕೆ ಸಿದ್ಧಗೊಂಡಿದ್ದು, ವೇದಿಕೆ ಮೇಲೆ ಕೇವಲ ಐದರಿಂದ ಆರು ಜನರು ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕರ್ತರಿಗೆ ಕುಳಿತುಕೊಳ್ಳಲು ವೇದಿಕೆ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕ ಗಿಡಗು ರುದ್ರರಾಜು ತಿಳಿಸಿದ್ದಾರೆ.


ಪ್ರಾಯೋಗಿಕ ಓಡಾಟ: ಶುಕ್ರವಾರ ರಾಹುಲ್‌ಗಾಂಧಿ ನಗರಕ್ಕೆ ಬರುವ ಹಿನ್ನೆಲೆಯಲ್ಲಿ ಗುರುವಾರ ಪ್ರಾಯೋಗಿಕವಾಗಿ ಹೆಲಿಕಾಪ್ಟರ್ ಮತ್ತು ರಸ್ತೆ ಸಂಚಾರದಲ್ಲಿ ಪೊಲೀಸ್ ವಾಹನಗಳ ಓಡಾಟ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಮೂರು ಹೆಲಿಕಾಪ್ಟರ್‌ಗಳು ಬರುತ್ತಿದ್ದು, ಎರಡು ಹೆಲಿಕಾಪ್ಟರ್‌ನಲ್ಲಿ ರಾಹುಲ್‌ಗಾಂಧಿ ಹಾಗೂ ಅವರ ಭಧ್ರತಾ ಕಮಾಂಡರ್‌ಗಳು ಬರಲಿದ್ದಾರೆ. ಇನ್ನೊಂದು ಹೆಲಿಕಾಪ್ಟರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಹಾಗೂ ಇತರ ಮುಖಂಡರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT