ADVERTISEMENT

ರಸ್ತೆ ಕಾಮಗಾರಿ ಕಳಪೆ: ನಾಗರಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 7:48 IST
Last Updated 25 ನವೆಂಬರ್ 2017, 7:48 IST
ಒಂದೇ ದಿನದಲ್ಲಿ ಹದಗೆಟ್ಟ ರಸ್ತೆಯ ಡಾಂಬರು
ಒಂದೇ ದಿನದಲ್ಲಿ ಹದಗೆಟ್ಟ ರಸ್ತೆಯ ಡಾಂಬರು   

ಹಾವೇರಿ: ನಗರ ಅಭಿವೃದ್ಧಿಗೆ ಮುಖ್ಯಮಂತ್ರಿ ₹50 ಕೋಟಿ ವಿಶೇಷ ಅನುದಾನದ ಅಡಿ ನಡೆಯುತ್ತಿರುವ ತಹಶೀಲ್ದಾರ್ ನಿವಾಸದಿಂದ ಜೆ.ಪಿ. ವೃತ್ತ ತನಕದ ರಸ್ತೆ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದ್ದು, ನಗರಾಭಿವೃದ್ಧಿ ಕೋಶದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಶುಕ್ರವಾರ ಬೆಳಿಗ್ಗೆ ಇಲ್ಲಿ ಪ್ರತಿಭಟನೆ ನಡೆಸಿದರು.

‘ತಹಶೀಲ್ದಾರ್ ನಿವಾಸದಿಂದ ಜೆ.ಎಚ್. ಪಟೇಲ್ ವೃತ್ತದ ಮೂಲಕ ಜೆ.ಪಿ. ಪಟೇಲ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರದ ಪ್ರಮುಖ ರಸ್ತೆಯಾಗಿದೆ. ಆದರೆ, ಕ್ರಿಯಾ ಯೋಜನೆ ಪ್ರಕಾರ ಈ ರಸ್ತೆ ಕಾಮಗಾರಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

‘ಈ ಹಿಂದೆ ಚರಂಡಿ ನಿರ್ಮಿಸದೇ ಕಾಮಗಾರಿ ಆರಂಭಿಸಿದ್ದರು. ಆ ಬಳಿಕ ಪರವಾನಗಿ ರಹಿತವಾಗಿ ರಸ್ತೆ ಬದಿಯ ಮರಗಳ ಹನನ ಮಾಡಿದ್ದರು. ಕ್ಲುಪ್ತ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ತಡೆದ ಕಾರಣ ಮರಗಳು ಉಳಿದುಕೊಂಡಿವೆ. ಅಲ್ಲದೇ, ಸೂಕ್ತ ರೀತಿಯಲ್ಲಿ ರಸ್ತೆ ವಿಸ್ತರಣೆಯೂ ಆಗಿಲ್ಲ. ಚರಂಡಿಗೆ ಇನ್ನೂ ಸಿಮೆಂಟ್ (ಸಿ.ಡಿ) ಹಾಕಿಲ್ಲ. ಆದಕ್ಕೂ ಮೊದಲೇ ಡಾಂಬರೀಕರಣ ಆರಂಭಗೊಂಡಿದೆ’ ಎಂದು ದೂರಿದರು.

ADVERTISEMENT

‘ಇಲ್ಲಿನ ಮುನ್ಸಿಪಲ್ ಹೈಸ್ಕೂಲ್‌ ಮುಂಭಾಗದ ಮೈದಾನದ ಮಳೆ ನೀರು ಜೆ.ಎಚ್. ಪಟೇಲ್ ವೃತ್ತದ ಮೂಲಕ ಗೆಳೆಯರ ಬಳಗ ಶಾಲಾ ಮಂಭಾಗದ ಚರಂಡಿಗೆ ಬಂದು ಸೇರಬೇಕು. ಆದರೆ, ಇಲ್ಲಿ ರಸ್ತೆಗೆ ಅಡ್ಡಲಾಗಿ ಸಿ.ಡಿ ನಿರ್ಮಿಸದ ಕಾರಣ ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತಿದೆ. ಇದರಿಂದಾಗಿ ಇಲ್ಲಿ ರಸ್ತೆ ನಿರ್ಮಿಸಿದ ಆರು ತಿಂಗಳೊಳಗೆ ಹದಗೆಡುತ್ತಿದೆ. ಆದರೆ, ಈ ಬಗ್ಗೆ ಎಂಜಿನಿಯರ್‌ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಲೂ ಅಡ್ಡಲಾಗಿ ಸಿ.ಡಿ ನಿರ್ಮಿಸುವ ಮೊದಲೇ ಡಾಂಬರೀಕರಣ ನಡೆಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

‘ಈ ರಸ್ತೆಗೆ ಗುರುವಾರ ಡಾಂಬರು ಹಾಕಲಾಗಿದೆ. ಆದರೆ, ಶುಕ್ರವಾರ ಬೆಳಿಗ್ಗೆ ಡಾಂಬರು ಮಿಕ್ಸ್‌ ಕೈಯಲ್ಲಿ ಬರುತ್ತಿದೆ. ನಗರಾಭಿವೃದ್ಧಿ ಕೋಶದ ಅಧಿಕಾರಿಗಳು, ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಳಪೆ ಕಾಮಗಾರಿಗೆ ಕಾರಣ. ಈ ಹಿಂದೆ ನಗರೋತ್ಥಾನ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಅಧಿಕಾರಿಗಳು ಅಮಾನತು ಆಗಿದ್ದರು. ಇದೇ ಮಾದರಿಯಲ್ಲಿ ₹50 ಕೋಟಿ ಅನುದಾನದ ಗುತ್ತಿಗೆ ನೀಡಿರುವ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಪೌರಾಯುಕ್ತ ಶಿವಕುಮಾರಯ್ಯ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಂಗಾಧರಯ್ಯ ಅವರು ಎಪಿಎಂಸಿ ಅಧ್ಯಕ್ಷರಾದ ಗುತ್ತಿಗೆದಾರ ಮಲ್ಲಿಕಾರ್ಜುನ ಹಾವೇರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಡಾಂಬರನ್ನು ಕಿತ್ತು ತೆಗೆದು ಹೊಸದಾಗಿ ಹಾಕಿಸಬೇಕು ಎಂದು ಜನತೆ ಆಗ್ರಹಿಸಿದರು.

ಹಾವೇರಿ ಸುಧಾರಣಾ ಸಮಿತಿಯ ಶಂಕರ ಪುಟ್ಟಪ್ಪ ಚಕ್ರಸಾಲಿ, ಮೆಹಿಬೂಬ್ ಸಾಬ್ ಹೊಸರಿತ್ತಿ, ಯಲ್ಲಪ್ಪ ಬೋಸ್ಲೆ, ಶಿವಾನಂದ ಚಕ್ರಸಾಲಿ, ಸಿದ್ದಯ್ಯ ನಡುವಿನ ಮಠ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ನಾಲ್ವರಿಗೆ ನೋಟಿಸ್‌!
ಹಾವೇರಿ: ಗುತ್ತಿಗೆದಾರ ಮಲ್ಲಿಕಾರ್ಜುನ ಹಾವೇರಿಗೆ ನೋಟಿಸ್‌ ನೀಡಲಾಗುವುದು. ಕಳಪೆ ಕಾಮಗಾರಿ ಮುಂದುವರಿಸಿದರೆ ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಲ್ಲದೇ, ನಗರಭಿವೃದ್ಧಿಕೋಶ, ನಗರಸಭೆ ಹಾಗೂ ಕನ್ಸಲ್‌ಟೆಂಟ್‌ನ ಎಂಜಿನಿಯರ್‌ಗಳಿಗೂ ನೋಟಿಸ್ ನೀಡಿ, ನಿಗಾ ವಹಿಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು.

ಚರಂಡಿ ಕಾಮಗಾರಿ ನಡೆಸದೇ ಡಾಂಬರೀಕರಣ ನಡೆಸಿದ ಬಗ್ಗೆ ದೂರುಗಳು ಬಂದಿತ್ತು. ಚರಂಡಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದೇನೆ. ರಸ್ತೆ ಕಾಮಗಾರಿ ಮೇಲೆ ಮೂವರು ಎಂಜಿನಿಯರ್‌ಗಳು ಕಡ್ಡಾಯವಾಗಿ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದೇನೆ’ ಎಂದರು. ‘ಟಾರ್‌ ಕಳಪೆ ಗುಣಮಟ್ಟದ ಕಾರಣ ಕಿತ್ತು ಹೋಗಿದೆ. ಹೀಗಾಗಿ ಅದನ್ನು ತೆಗೆದು ಹೊಸದಾಗಿ ಹಾಕುವಂತೆ ಸೂಚಿಸಿದ್ದೇನೆ’ ಎಂದರು.

ಹಾವೇರಿ: ಇಲ್ಲಿ ಕಾಂಗ್ರೆಸ್‌ ಕೆಲಸ ನಡೆಸುತ್ತಿದೆ. ಬಿಜೆಪಿಯವರು ಗುತ್ತಿಗೆ ಹಿಡಿದಿದ್ದಾರೆ. ಇಬ್ಬರೂ ಸೇರಿ ಹಾವೇರಿಯನ್ನು ಹದಗೆಡಿಸುತ್ತಿದ್ದಾರೆ. ಮೆಟ್ಲಿಂಗ್, ಸಿ.ಡಿ.ಗಳು ಇನ್ನೂ ಆಗಿಲ್ಲ. ಆದರೆ, ಡಾಂಬರು ಹಾಕಲು ಆರಂಭಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ? ನಾವು ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ತಿಳಿಸಿದರು.

* * 

ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ವರ್ಗಾವಣೆ ಆದರೂ ಹೋಗುತ್ತಿಲ್ಲ. ಇದರ ಕಾರಣವನ್ನು ಪತ್ತೆ ಹಚ್ಚಿದರೆ, ಸಂಪೂರ್ಣ ಸತ್ಯ ಹೊರಬರಬಹುದು.
ಶಿವಾನಂದ ಚಕ್ರಸಾಲಿ
ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.