ADVERTISEMENT

‘ರಿಲ್ಯಾಕ್ಸ್’ ಬಿಟ್ಟು ಸಾಂತ್ವನ ಹೇಳಿದ ಲಮಾಣಿ

ಬೆಳಿಗ್ಗೆ ಮಸಾಜ್‌ನೊಂದಿಗೆ ಸ್ನಾನ; ಮಧ್ಯಾಹ್ನ ಸಾವಿನ ಮನೆಗಳಿಗೆ ಭೇಟಿ

ಹರ್ಷವರ್ಧನ ಪಿ.ಆರ್.
Published 14 ಮೇ 2018, 11:08 IST
Last Updated 14 ಮೇ 2018, 11:08 IST

ಹಾವೇರಿ: ಚುನಾವಣೆಯ ಸತತ ಪ್ರಚಾರ ಹಾಗೂ ಓಡಾಟದಿಂದ ಬಳಲಿದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ಮತದಾನದ ಮರುದಿನ ಸಂಪೂರ್ಣ ವಿಶ್ರಾಂತಿ ಮೂಡಿನಲ್ಲಿರುತ್ತಾರೆ. ಯಾರೂ ಭೇಟಿ ಮತ್ತು ಮಾತನಾಡುವಂತಿಲ್ಲ ಎಂದು ನಿರೀಕ್ಷಿಸಿದವರಿಗೆ, ಭಾನುವಾರ ಅಚ್ಚರಿ ಮೂಡಿತ್ತು.

‘ರಿಲ್ಯಾಕ್ಸ್’ ಆಗಬೇಕಾಗಿದ್ದ ಲಮಾಣಿ, ಬೆಂಬಲಿಗರು ಮತ್ತು ಆತ್ಮೀಯರ ಮರಣದ ಸುದ್ದಿ ಕೇಳಿ ದೌಡಾಯಿಸಿದ್ದರು. ಮೃತರ ಮನೆಯವರನ್ನು ಸಂತೈಸಿದ್ದರು.

ಚುನಾವಣೆ ಸಂದರ್ಭ ಅವರ ಜೊತೆಗಿದ್ದ ಲಿಂಗಪ್ಪ ಚಪ್ಪರಮನಿ, ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಎಸ್.ಪಾಟೀಲರ ಸಂಬಂಧಿಕರು ಹಾಗೂ ಕ್ಷೇತ್ರದಲ್ಲಿನ ಇನ್ನೊಬ್ಬರ ಸಾವಿನ ಮನೆಗೆ ತೆರಳಿದ ಅವರು, ಸಾಂತ್ವನ ಹೇಳಿ ಬಂದಿದ್ದರು.

ADVERTISEMENT

ಸುಮಾರು 25 ದಿನಗಳ ಸತತ ಪ್ರಚಾರ ಹಾಗೂ ಶನಿವಾರ ನಡೆದ ಮತದಾನದ ಬಳಿಕ ನಿಟ್ಟುಸಿರು ಬಿಟ್ಟ ಲಮಾಣಿ ಶನಿವಾರ ತಡರಾತ್ರಿ ನಿದ್ರೆಗೆ ಜಾರಿದ್ದರು. ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸ್ವಲ್ಪ ಆರಾಮವಾಗಿಯೇ ಎದ್ದ ಅವರು, ದಿನ ಪತ್ರಿಕೆಗಳ ವರದಿಯನ್ನು ಅವಲೋಕಿಸಿದರು. ಆತ ತಾನೆ ಮನೆಗೆ ಬಂದ ಆಯುರ್ವೇದ ತಜ್ಞರೊಬ್ಬರು ಮಸಾಜ್ ಮಾಡಿದರು. ಬಳಿಕ ಸ್ನಾನ ಇತ್ಯಾದಿಗಳನ್ನು ಮುಗಿಸಿದರು ಎಂದು ಅವರ ಆಪ್ತ ಸಿಬ್ಬಂದಿ ತಿಳಿಸಿದರು.

ಈ ನಡುವೆಯೇ, ಮನೆಗೆ ಬಂದಿದ್ದ ಕಾರ್ಯಕರ್ತರನ್ನು ಭೇಟಿಯಾದರು. ಆಗ, ಪರಿಚಯಸ್ಥರ ನಿಧನದ ಮಾಹಿತಿ ಬಂತು. ತಕ್ಷಣವೇ ಕುಟುಂಬ ಸಮೇತ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು ಎಂದು ವಿವರಿಸಿದರು.

ಮಧ್ಯಾಹ್ನ ವೇಳೆಗೆ ಮನೆಗೆ ಬಂದ ಅವರು, ಕುಟುಂಬದ ಜೊತೆ ಭೋಜನ ಸವಿದರು. ಬಳಿಕ, ಟಿ.ವಿಯಲ್ಲಿನ ಫಲಿತಾಂಶದ ವಿಶ್ಲೇಷಣೆಯನ್ನು ವೀಕ್ಷಿಸಿದರು. ಇತ್ತ ಆಪ್ತ ಸಿಬ್ಬಂದಿ ಮತಗಟ್ಟೆಗಳ ಶೇಕಡಾವಾರು ಮತದಾನ ಪ್ರಮಾಣ ಹಾಗೂ ತಾವು ಪಡೆಯಬಹುದಾದ ಮತಗಳ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದರು. ಲಮಾಣಿ ಅವರಿಗೆ ಮಾಹಿತಿ ನೀಡುತ್ತಿದ್ದರು.

ನಡು ನಡುವೆ ಬರುತ್ತಿದ್ದ ಕರೆಗಳು, ಅಭಿಮಾನಿಗಳು, ಬೆಂಬಲಿಗರು, ಬಂಧುಗಳನ್ನು ಪ್ರೀತಿಯಿಂದಲೇ ಬರಮಾಡಿಕೊಂಡ ಲಮಾಣಿಯವರು ಹರಟೆಯಲ್ಲಿ ತೊಡಗಿಕೊಂಡಿದ್ದರು.

‘ಸುಮಾರು 20 ದಿನಗಳಿಂದ ಸತತ ಓಡಾಟ ಇತ್ತು. ತಡರಾತ್ರಿ 1ಗಂಟೆಯ ಬಳಿಕ ಮಲಗಿದರೆ, ಬೆಳಿಗ್ಗೆ 5.30ರ ಸುಮಾರಿಗೆ ದಿನಚರಿ ಆರಂಭಗೊಳ್ಳುತ್ತಿತ್ತು. ಆದರೆ, ಶಾಸಕ, ಸಚಿವನಾದ ಬಳಿಕ ಜನರ ಒಡನಾಟ ಹೆಚ್ಚಿದ ಕಾರಣ ಅವಧಿ ಮೀರಿ ಕೆಲಸಗಳು ಸಾಮಾನ್ಯ. ಚುನಾವಣೆ ಎಂದಾಕ್ಷಣ ಸ್ವಲ್ಪ ಒತ್ತಡ ಸಹಜವಾಗಿ ಉಂಟಾಗುತ್ತದೆ. ಹೀಗಾಗಿ ಮತದಾನ ಮುಗಿದ ಬಳಿಕ ಸಂಪೂರ್ಣ ರಿಲ್ಯಾಕ್ಸ್ ಆಗಿದ್ದೇನೆ’ ಎಂದು ರುದ್ರಪ್ಪ ಲಮಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಜುಳಾ ಚಾ ಕರ್‌ ಲೇನಾ ಆ...

ರುದ್ರಪ್ಪ ಲಮಾಣಿ ರಿಲ್ಯಾಕ್ಸ್‌ ಮೂಡಿನಲ್ಲಿದ್ದರೂ, ಬೆಂಬಲಿಗರು, ಬಂಧುಗಳು ಹಾಗೂ ಹಿತೈಷಿಗಳು ಬಂದ ಕೂಡಲೇ ಸ್ವತಃ ಅಡುಗೆ ಮನೆಗೆ ದೌಡಾಯಿಸಿ, ‘ಮಂಜುಳಾ ಚಾ ಕರ್ ಲೇ ನಾ ಆ...’ (ಮಂಜುಳಾ ಚಹಾ ಮಾಡಿ ತಾ) ಎಂದು ಬಂಜಾರ ಭಾಷೆಯಲ್ಲಿ ಪ್ರೀತಿಯಿಂದ ಪತ್ನಿಗೆ ಹೇಳುತ್ತಿದ್ದರು.ಶಿಕ್ಷಕಿ, ಸಚಿವರ ಪತ್ನಿ ಎಂಬ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ, ಅವರ ಪತ್ನಿ ಮಂಜುಳಾ ಬಾಯಿ ಚಹಾ ಮಾಡಿಕೊಂಡು ತಂದು ಕೊಟ್ಟರು. ಮಗಳು ಡಾ. ಭಾನುಪ್ರಿಯಾ ನಸುನಗುತ್ತಲೇ ಅಲ್ಲಿದ್ದವರ ಜೊತೆ ಮಾತುಕತೆಯಲ್ಲಿ ತೊಡಗಿದ್ದರು.

**
ಅಭಿವೃದ್ಧಿ ಮತ್ತು ಶಾಂತಿಗಾಗಿ ದುಡಿದವರನ್ನು ಹಾವೇರಿ ಜನತೆ ಎಂದಿಗೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ದೃಢವಾಗಿದೆ – ರುದ್ರಪ್ಪ ಲಮಾಣಿ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.