ADVERTISEMENT

ವಿದರ್ಭ ಪ್ಯಾಕೇಜ್‌ಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 7:05 IST
Last Updated 17 ಜುಲೈ 2012, 7:05 IST

ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಮುಂಗಾರು ಮಳೆ ಬಾರದೆ ಸಂಪೂರ್ಣ ಬರಗಾಲ ಬಂದಿದ್ದರಿಂದ ಮೋಡ ಬಿತ್ತನೆ ಮಾಡಬೇಕು ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ  ವಿದರ್ಭ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಮಹ್ಮದ್ ಜುಬೈರ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಬಿ.ಎಂ. ಜಯದೇವ ಮಾತನಾಡಿ, ಜಿಲ್ಲೆಯಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಬರ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಇಲ್ಲ. ಬೋರ್‌ವೆಲ್ ಬತ್ತಿವೆ, ಮೋಡಗಳು ಚದುರುವ ಮುನ್ನವೇ ಮೋಡ ಬಿತ್ತನೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ದನಕರುಗಳಿಗೆ ಮೇವು ಮತ್ತು ಗೋಶಾಲೆ ತೆರೆಯಬೇಕು. ಇಲ್ಲದಿದ್ದರೆ ರೈತರು ಜಾನುವಾರುಗಳನ್ನು ಖಸಾಯಿಖಾನೆಗೆ ಒಯ್ಯುವ ಆತಂಕ ಕಾಡುತ್ತಿದೆ ಎಂದು ತಿಳಿಸಿದರು.

ತುಂಗಾ ಮೇಲ್ದಂಡೆ ಕಾಲುವೆಗೆ ನೀರನ್ನು ಜಮೀನುಗಳಿಗೆ ಹರಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದೂ ಒತ್ತಾಯಿಸಿದರು.

ನಾಗರಾಜ ದೊಡ್ಡಮನಿ, ಅಶೋಕ ಬದ್ರಮ್ಮನವರ, ಪರಶುರಾಮ ದೊಡ್ಡಹನುಂತನವರ, ರಾಜು ಸುರ್ವೆ, ಫಕ್ಕೀರಪ್ಪ, ಪ್ರಕಾಶ ಹಲುವಾಗಲ, ಪರಸ್ಪ ವಡ್ಡಿರ, ಬಾಬುಗೌಡ ಕೆರೂಡಿ, ನಾರಾಯಣ ಲಮಾಣಿ. ಗುರುಶಾಂತಯ್ಯ ಬಣಕಾರ, ಕೊಟ್ರೇಶ ಸವಣೂರು, ಪರಮೇಶಪ್ಪ ಕಾಳಮ್ಮನವರ ಪ್ರತಿಭಟನೆಯಲ್ಲಿ ಭಾಗಹಿಸಿದ್ದರು.

ಸ್ವಾಭಿಮಾನಿ ಕರವೇ ಪ್ರತಿಭಟನೆ
ರಾಣೆಬೆನ್ನೂರು: ಮಹಾರಾಷ್ಟ್ರ ಸರ್ಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿಕೊಂಡಿದ್ದನ್ನು ವಿರೋಧಿಸಿ ನಗರದಲ್ಲಿ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರು ತಹಶೀಲ್ದಾರ ಮಹ್ಮದ್ ಜುಬೈರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವುದನ್ನು ಸಹಿಸಲಾಗದು ಎಂದರು.
 
ಸ್ವಾಭಿಮಾನಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸಿದ್ದಾರೂಢ ಗುರುಂ, ಪರಸಪ್ಪ ಶೆಟ್ಟರ, ಪಲಾಕ್ಷಪ್ಪ ಕಡೇಮನಿ, ಚಂದ್ರು ಕಡ್ಲಿಗೊಂದಿ, ತಿಮ್ಮಣ್ಣ ವೆಂಕಣ್ಣನವರ, ಕೊಟ್ರೇಶ ಕುಂದಾಪುರ, ದೇವರಾಜ ಕಲಾಲ, ಶ್ಯಾಮರಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿದ್ಧಾರೂಢ ದೇವಸ್ಥಾನಕ್ಕೆ ರೂ 1.25 ಲಕ್ಷ ದೇಣಿಗೆ
ರಾಣೆಬೆನ್ನೂರು: ತಾಲ್ಲೂಕಿನ ಮಾಕನೂರು ಗ್ರಾಮದ ಸಿದ್ಧಾರೂಢ ಮಠ ಹಾಗೂ ತುಳಜಾಭವಾನಿ ದೇವಸ್ಥಾನಗಳಿಗೆ ಬೆಂಗಳೂರು ಬಿಬಿಎಂಪಿ ಉಪ ಮೇಯರ್ ಆರ್. ಶಂಕರ್ 1.25 ಲಕ್ಷ ರೂಪಾಯಿ ದೇಣಿಗೆ ನೀಡಿದರು.

ನಂತರ ಮಾತನಾಡಿದ ಅವರು ಸನ್ಮಾರ್ಗದೆಡೆಗೆ ಒಯ್ಯುವ ಮಂದಿರ ಮಠಗಳನ್ನು ಸಂರಕ್ಷಿಸುವ ಹಾಗೂ ಜೀರ್ಣೋದ್ಧಾರ ಪಡಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ವೈಯಕ್ತಿಕ ಹಿತಾಸಕ್ತಿ ಬಿಟ್ಟು, ಗಳಿಕೆಯ ಒಂದು ಪಾಲನ್ನು ಸಮಾಜದ ಹಿತಕ್ಕೆ ಬಳಸುವುದು ಧರ್ಮ. ಇದು ನೀಡುವ ಆತ್ಮತೃಪ್ತಿ ಬೇರೊಂದರಲ್ಲಿ ಸಿಗುವುದಿಲ್ಲ ಎಂದು ತಿಳಿಸಿದರು.

ನರಸಪ್ಪ ಅಂಗಡಿ, ಬಸಪ್ಪ ಎಲಜಿ, ಹನುಮಂತಪ್ಪ ಆರೇರ್, ಕರಬಸಪ್ಪ ಮುದಿಗೌಡ್ರ, ಹೇಮನಗೌಡ ಮುದಿಗೌಡ್ರ, ಮಂಜುನಾಥ ಕುಂಬಳೂರ, ಹನುಮಂತಪ್ಪ ಸಾರಥಿ, ವೆಂಕಟೇಶ್ ಪ್ರಸಾದ, ಸುರೇಶ್ ಬಾಬು, ಹನುಮಂತಪ್ಪ ಸಣ್ಣೇರ್, ಕೊಟ್ರಪ್ಪ ಐರಣಿ, ತಿಪ್ಪಣ್ಣ ಹಲಗೇರಿ, ಅಶೋಕ್ ಹೊಟ್ಟೆಮಲ್ಲಣ್ಣನವರ್, ಲಿಂಗದಹಳ್ಳಿ, ಮಂಜಪ್ಪ ಆರೇರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.