ADVERTISEMENT

ವಿದ್ಯುತ್ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:23 IST
Last Updated 23 ಏಪ್ರಿಲ್ 2013, 9:23 IST

ಗುತ್ತಲ: ಸಮೀಪದ ಕುರಿ ಸಂವರ್ಧನಾ ಕೇಂದ್ರದ ಹತ್ತಿರ, ಹಾವೇರಿ ಬಯೋಮಾಸ್ ಕಂಪೆನಿ ನಿರ್ಮಿಸುತ್ತಿರುವ ವಿದ್ಯುತ್ ಉತ್ಪಾದನಾ ಕೇಂದ್ರದ ನಿರ್ಮಾಣವನ್ನು ವಿರೋಧಿಸಿ, ನೂರಾರು ರೈತರು ನಿರ್ಮಾಣ ಕೇಂದ್ರದ ಎದುರಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮಾಣಕ್ಕೆ ಪ್ರಾರಂಭದಲ್ಲಿಯೇ ಈ ಭಾಗದ ರೈತರು ವಿರೋಧವನ್ನು ವ್ಯಕ್ತಪಡಿಸಿ, ಬಯೋಮಾಸ್ ಕಂಪೆನಿ ಅಧಿಕಾರಿಗಳಿಗೆ ಕಳೆದ ಶುಕ್ರವಾರ ಎಚ್ಚರಿಕೆಯನ್ನು ನೀಡಿ ವಾಗ್ವಾದ ನಡೆಸಿದ್ದರು.ಇದನ್ನು ಲೆಕ್ಕಿಸದೇ ಕಂಪೆನಿ ಅಧಿಕಾರಿಗಳು ಕೇಂದ್ರ ನಿರ್ಮಾಣಕ್ಕೆ ಮುಂದಾದಾಗ, ರೈತರು ಸುಮಾರು 3ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಂಜುನಾಥ ಕದಂ, ಕಂಪೆನಿಯನ್ನು ಪ್ರಾರಂಭಿಸುವ ಮತ್ತು ನಿರ್ಮಾಣ ಕೇಂದ್ರಕ್ಕೆ ಕೈಹಾಕುವ ಮುನ್ನ, ಕಂಪೆನಿಯ ಯಾವ ಅಧಿಕಾರಿಗಳು ನಿರ್ಮಾಣ ಕೇಂದ್ರದ ಸುತ್ತಮುತ್ತ, ಉಳಿಮೆಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರೊಂದಿಗೆ ಚರ್ಚಿಸದೇ, ನಿರ್ಮಾಣ ಕೇಂದ್ರಕ್ಕೆ ಕೈ ಹಾಕಿರುವುದು ವಿಷಾದದ ಸಂಗತಿಯಾಗಿದೆ. ರೈತರಿಗೆ ಕಂಪೆನಿ ಮೋಸ ಮಾಡಲು ಹೊರಟಿದೆ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ ಕಂಪೆನಿಯ ವ್ಯವಸ್ಥಾಪಕ ಪಿ.ವಿ. ಗೋಪಿನಾಥ, ಕಂಪೆನಿ ತೆಗೆದುಕೊಂಡ ಪರವಾನಗಿ ದಾಖಲೆಗಳನ್ನು ತೋರಿಸಿ ರೈತರನ್ನು ಸಂತೈಸಲು ಪ್ರಯತ್ನಿಸಲು ಮುಂದಾದಾಗ ರೈತರು ಪ್ರತಿಭಟನೆಯನ್ನು ಮತ್ತಷ್ಟು ಉಗ್ರಗೊಳಿಸಿದರು.

`ಯಾವ ರೈತರನ್ನು ಕೇಳಿ ಯಾರು ತಮಗೆ ಪರವಾನಗಿ ನೀಡಿದ್ದು?' ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮತ್ತೆ ಗೋಪಿನಾಥ ನಿರ್ಮಾಣ ಕೇಂದ್ರನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವುದರಿಂದ ಕಾರ್ಮಿಕರಿಗೆ ಮತ್ತು ಕಂಪನಿಗೆ ತುಂಬಲಾರದ ನಷ್ಟವಾಗುತ್ತದೆ ಎಂದು ರೈತರ ಬಳಿ ವಿನಂತಿಸಿಕೊಂಡರು.

ನಿರ್ಮಾಣ ಕೇಂದ್ರದ ಸುತ್ತಮುತ್ತಲಿನ ಬಹುತೇಕ ರೈತರಿಗೆ ಮಾಹಿತಿ ಇಲ್ಲವಾದ್ದರಿಂದ, ಆ ಎಲ್ಲ ರೈತರ ಅಭಿಪ್ರಾಯವನ್ನು ಪಡೆದುಕೊಂಡು, ನಾವೆಲ್ಲರೂ ತೆಗೆದುಕೊಂಡ ನಿರ್ಣಯವನ್ನು ಕಂಪನಿಗೆ ತಿಳಿಸುವುದಾಗಿ ಹಾಗೂ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ತಾಕೀತು ಮಾಡಿದರು.

ಕಂಪೆನಿಯ ಗೋಪಿನಾಥ ಅವರು, ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಂಬಂಧಿಸಿದ ರೈತರಿಗೆ ನೋಟಿಸ್ ನೀಡಿ, ಮುಂದಿನ ಬೆಳವಣಿಗೆಯನ್ನು ಕಾಯ್ದು ನೋಡಲಾಗುತ್ತದೆ ಎಂಬ ಭರವಸೆ ನೀಡಿದಾಗ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಪರಮೇಶ ಕುರವತ್ತಿಗೌಡ್ರ, ಹನುಮಂತಪ್ಪ ಲಮಾಣಿ, ಮಾಲತೇಶ ಗಿರಯಪ್ಪನವರ, ಸುರೇಶ ಚಲವಾದಿ, ಚಿತ್ರ ನಿರ್ಮಾಪಕ ಗುರುರಾಜ ನೆಗಳೂರ, ಗುಡ್ಡಪ್ಪ ಗಿರಿಯಪ್ಪನವರ, ಮಹಬೂಬಸಾಬ ನಧಾಪ, ಸಿದ್ದಪ್ಪ ಚಿಂದಿ, ಕಾಳಿಂಗಪ್ಪ ಬಿಕ್ಕಯವರ, ಬಸವರಾಜ ಕುರಬಗೇರಿ ಸೇರಿದಂತೆ ತಿಮ್ಮಾಪುರ ಹಾಗೂ ಕೂರಗುಂದ ಗ್ರಾಮದ ಅನೇಕ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.