ADVERTISEMENT

ವಿದ್ಯುತ್ ನಿರ್ವಹಣೆ ವೈಫಲ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:50 IST
Last Updated 11 ಅಕ್ಟೋಬರ್ 2011, 6:50 IST

ಹಾವೇರಿ: `ರಾಜ್ಯ ಸರ್ಕಾರ ವಿದ್ಯುತ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಮಳೆಗಾಲ ಮುಗಿಯುವ ಮುನ್ನವೇ ರಾಜ್ಯವನ್ನು ಸಂಪೂರ್ಣ ಕತ್ತಲಲ್ಲಿ ಮುಳಗುವಂತೆ ಮಾಡಿದೆ~ ಎಂದು ಮಾಜಿ ಸಚಿವ ಕೆ.ಬಿ.ಕೋಳಿವಾಡ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಆದರೆ, ರಾಜ್ಯ ಸರ್ಕಾರಕ್ಕೆ ಮುಂದಾಲೋಚನೆ ಇಲ್ಲದ್ದರಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡು ರಾಜ್ಯ ಅಕಾಲಿಕವಾಗಿ ವಿದ್ಯುತ್ ಕ್ಷಾಮವನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ತಮ್ಮ ವೈಫಲ್ಯ ಹಾಗೂ ಜವಾಬ್ದಾರಿಯಿಂದ ನುಣಚಿಕೊಳ್ಳಲು ಅನವಶ್ಯಕವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

ಕೇಂದ್ರ ಸರ್ಕಾರ ನಿಜವಾಗಿಯೂ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದ್ದರೇ ಕಲ್ಲಿದ್ದಲು ಪೂರೈಕೆಯ ಅಂಕಿ ಸಂಖ್ಯೆಯನ್ನು ರಾಜ್ಯ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಸಿ.ಎಂ.ಕೈಗೊಂಬೆ: ಲೋಕಾಯುಕ್ತ ಸಂತೋಷ ಹೆಗಡೆ ಅವರು ಗಣಿ ಅವ್ಯವಹಾರ ಕುರಿತು ವರದಿ ಸಲ್ಲಿಸಿ ಎರಡು ತಿಂಗಳಾಗುತ್ತಾ ಬಂದಿದೆ. ರಾಜ್ಯ ಸರ್ಕಾರ ಇನ್ನೂ ಆ ವರದಿಯನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಅ.16 ರೊಳಗೆ ಒಪ್ಪಿಕೊಳ್ಳದಿದ್ದರೆ, ಮುಖ್ಯಮಂತ್ರಿ ಸದಾನಂದಗೌಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಂಬೆ ಎಂಬುದನ್ನು ಸಾಬೀತು ಪಡಿಸಿದಂತಾಗುತ್ತದೆ ಎಂದು ಹೇಳಿದರು.

ಭ್ರಷ್ಟಾಚಾರದಿಂದ ಏನೆಲ್ಲ ಆವಾಂತರಗಳನ್ನು ಸೃಷ್ಟಿಸಿಕೊಂಡ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಬುದ್ದ್ಧಿ ಕಲಿತಂತಿಲ್ಲ. ಮತ್ತೆ ಮತ್ತೆ ತಪ್ಪುಗಳನ್ನು ಎಸಗಿ ಜನರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ. ಭ್ರಷ್ಟ ವ್ಯವಸ್ಥೆಯನ್ನು ಪ್ರೋತ್ಸಾಹಿಸವ ಮೂಲಕ ನಾಡಿನ ಜನರಿಗೆ ವ್ಯವಸ್ಥಿತವಾಗಿ ವಂಚಿಸಿ ಸಮಸ್ಯೆ ಹುಟ್ಟು ಹಾಕುತ್ತಿದೆ.

ಮೆಗಾಸಿಟಿ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಯೋಗಿಶ್ವರ ಅವರನ್ನು ಸಂಪುಟದಿಂದ ಕೈಬಿಡಲು ಮೀನ ಮೇಷ ಎನಿಸುವ ಮೂಲಕ ಮತ್ತೆ ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡಲು ಮುಂದಾಗಿದೆ. ತಕ್ಷಣವೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಅವರು ಒತ್ತಾಯಿಸಿದರು.

ವಿಧಾನಸಭಾಪತಿ ಅವರು ಶ್ರೀರಾಮುಲು ರಾಜೀನಾಮೆ ನೀಡಿ ತಿಂಗಳಾಗುತ್ತಾ ಬಂದಿದೆ. ಅವರ ರಾಜೀನಾಮೆ ಸ್ವೀಕರಿಸದೇ ಹಾಗೆ ಇಟ್ಟುಕೊಳ್ಳುವ ಮೂಲಕ ಸಭಾಪತಿಯವರು ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಅಯೋಗ್ಯ ಹಾಗೂ ಅನರ್ಹ ಸಭಾಪತಿ ಸಿಕ್ಕಿರುವುದು ರಾಜ್ಯದ ದುರ್ದೈವ ಎಂದು ಹೇಳಿದರು.

ಮುಂಬರುವ ವಿಧಾನಸಭೆ, ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಘೋಷಣೆಯಾಗುವ ಮೂರು ತಿಂಗಳ ಮುನ್ನವೇ ಪ್ರಕಟಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಗದೀಶ ಬೆಟಗೇರಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.