ADVERTISEMENT

`ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:09 IST
Last Updated 20 ಡಿಸೆಂಬರ್ 2012, 8:09 IST

ಶಿಗ್ಗಾವಿ: `ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಲು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುತ್ತಿರುವದು ಅವಶ್ಯವಾಗಿದೆ. ಇದರಿಂದ ಆರೋಗ್ಯವಂತ ನಾಡು ನಿರ್ಮಾಣವಾಗಲು ಸಾಧ್ಯ' ಎಂದು ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಕೆ. ರೆಹಮನಖಾನ್ ಹೇಳಿದರು.

ತಾಲ್ಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಕೆ.ಎಚ್. ಪಾಟೀಲ ಪ್ರತಿಷ್ಠಾನ, ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಕೂಲಿಕಾರರಿಗೂ ಇಂತಹ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಶ್ರೀಮಂತರು ಮಾತ್ರ ಶುದ್ಧ ನೀರನ್ನು ಕುಡಿದರೆ ಸಾಲದು.

ಅವರ ಜೊತೆಗೆ ಬಡ ಜನತೆಗೆ  ಯೋಜನೆಯನ್ನು ಲಾಭ ಮುಟ್ಟಿಸುತ್ತಿರುವ ಮೂಲಕ ಪಾಟೀಲ ಪ್ರತಿಷ್ಠಾನ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದರು. ಕೇಂದ್ರದಿಂದ ರಾಜ್ಯಕ್ಕೆ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದರಲ್ಲಿ ಕೆವಲ 15 ಪೈಸೆ ಮಾತ್ರ ಆ ಯೋಜನೆಗೆ ಬಂದು ತಲುಪುತ್ತಿದೆ. ಅದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.

ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಶುದ್ಧ ಕುಡಿಯುವ ನೀರನ್ನು ಸಮಾಜದ ಕಟ್ಟ ಕಡೆಯ ವರ್ಗದ ಬಡವರಿಗೆ ಒದಗಿಸುವದು ನಮ್ಮ ಸಂಕಲ್ಪವಾಗಿದೆ. ಅದರಂತೆ ಶಿಗ್ಗಾವಿ ತಾಲ್ಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಅದರಿಂದ ರೋಗ ಮುಕ್ತ ನಾಡು ನಿರ್ಮಾಣ ಉದ್ದೇಶ ಅಡಗಿದೆ ಎಂದ ಅವರು ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆಯವರು ಸಹ ಶುದ್ಧ ಕುಡಿಯುವ ನೀರು ಯೋಜನೆಗೆ ಅನುದಾನ ನಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಮುಕ್ತುಂಬಿ ಕುನ್ನೂರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನಪರಿಷತ್ ಸದಸ್ಯ ಶ್ರಿ ನಿವಾಸ ಮಾನೆ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಬೇದುಲ್ಲಾ ಶರೀಫ್, ವಿಧಾನಸಭೆ ಮಾಜಿ ಸಭಾಪತಿ ಮನೋಹರ ತಹಶೀಲ್ದಾರ, ತಾ.ಪಂ. ಮಾಜಿ ಅಧ್ಯಕ್ಷ ನಿಂಗಣ್ಣ ಜವಳಿ, ಗ್ರಾ.ಪಂ. ಉಪಾಧ್ಯಕ್ಷೆ ಅಕ್ಕಮ್ಮ ಕಡೆಮನಿ, ಮಾಜಿ ಶಾಸಕ ರುದ್ರಪ್ಪ ಲಮಾಣಿ,  ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎನ್. ವೆಂಕೋಜಿ, ಪ್ರದೀಪ್ ಗಿರಡ್ಡಿ, ಎಪಿಎಂಸಿ ಸದಸ್ಯ ಮಲ್ಲಿಕಾರ್ಜನಗೌಡ ಪಾಟೀಲ, ಈಶ್ವರ ತಾರಿಹಾಳ ಉಪಸ್ಥಿತರಿದ್ದರು. ಗುರುನಗೌಡ್ರ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT