ADVERTISEMENT

ಶುಲ್ಕ ಹೆಚ್ಚಳಕ್ಕೆ ಉಪಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:10 IST
Last Updated 8 ಫೆಬ್ರುವರಿ 2011, 9:10 IST

ಹಾವೇರಿ: ನಗರದಲ್ಲಿ ನಿವೇಶನ ಅಭಿವೃದ್ಧಿ ಶುಲ್ಕ ಹೆಚ್ಚಳ ಮಾಡುವುದನ್ನು ನಿರ್ಧರಿಸಲು ಉಪ ಸಮಿತಿಯೊಂದನ್ನು ರಚಿಸಲು ನಗರಸಭೆ ಸಾಮಾನ್ಯ ಸಭೆ ನಿರ್ಧರಿಸಿತು.ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಅವರು ಈ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ನಿವೇಶನ ಅಭಿವೃದ್ಧಿ ಶುಲ್ಕ ಬಹಳ ಕಡಿಮೆ ಇದ್ದು, ಒಂದು ಗುಂಟೆ ನಿವೇಶನ ಅಭಿವೃದ್ಧಿ ಶುಲ್ಕವನ್ನು ಕನಿಷ್ಠ 10 ಸಾವಿರ ರೂ.ಗಳಿಗೆ ಏರಿಸಬೇಕು ಎಂದು ಒತ್ತಾಯಿಸಿದರು.

ನೆರೆಯ ರಾಣೆಬೆನ್ನೂರ ನಗರದಲ್ಲಿ ಒಂದು ಗುಂಟೆ ನಿವೇಶನ ಅಭಿವೃದ್ಧಿಗೆ 25 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಹೊಸ ಬಡಾವಣೆಗಳಿಗೆ ನಗರಸಭೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ, ಬಡಾವಣೆಗಳಿಂದ ಬರುವ ಆದಾಯ ಮಾತ್ರ ಬಹಳ ಕಡಿಮೆಯಿದೆ. ಅದಕ್ಕಾಗಿ ಹಾವೇರಿ ನಗರದಲ್ಲಿಯೂ ಕನಿಷ್ಠ 10 ಸಾವಿರಕ್ಕೆ ಏರಿಸಿದರೆ, ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಹೇಳಿದರು.

ಆಗ ಶಾಸಕ ನೆಹರೂ ಓಲೇಕಾರ ಮಾತನಾಡಿ, ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಈಗ ಎಷ್ಟು ಶುಲ್ಕವನ್ನು ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.ಸದಸ್ಯ ಕಲ್ಲಮ್ಮನವರ “ಈಗ ಒಂದು ಗುಂಟೆ ನಿವೇಶನ ಅಭಿವೃದ್ಧಿಗೆ ಎರಡು ಸಾವಿರ ರೂ. ನೀಡಲಾಗುತ್ತದೆ. ರಾಣೆಬೆನ್ನೂರಿಗೆ ಹೋಲಿಸಿದರೆ, ಬಹಳ ಕಡಿಮೆ ಎನ್ನಬಹುದು. ಸ್ವಲ್ಪ ಹೆಚ್ಚಳ ಮಾಡುವುದರಿಂದ ಯಾರಿಗೂ ಹೊರೆಯಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರು, ಈ ಕುರಿತು ದಿಢೀರ್ ನಿರ್ಧಾರ ತೆಗೆದುಕೊಳ್ಳದೇ, ಆ ಬಗ್ಗೆ ನಿರ್ಧರಿಸಲು ಕಲ್ಲಮ್ಮನವರ ನೇತೃತ್ವದಲ್ಲಿ ಒಂದು ಉಪ ಸಮಿತಿಯನ್ನು ರಚಿಸಿ, ಅದರಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಕೆಲ ಸದಸ್ಯರನ್ನು ಹಾಕಿಕೊಂಡು ಈ ಕುರಿತು ಒಂದು ವರದಿ ನೀಡುವಂತೆ ಸಲಹೆ ಮಾಡಿದರು. ಅವರ ಸಲಹೆ ಮೇರೆಗೆ ಸಮಿತಿ ರಚಿಸಲು ಸಭೆ ಒಪ್ಪಿಗೆ ನೀಡಿತು.

15 ದಿನಗಳಲ್ಲಿ ಟೆಂಡರ್:  2011-12 ನೇ ಸಾಲಿನ ಸಂತೆ ಶುಲ್ಕದ ಬಹಿರಂಗ ಹರಾಜು, ಎಲ್‌ಬಿಎಸ್ ಮಾರುಕಟ್ಟೆಯ ತೆರೆದ ಕಟ್ಟೆಯ 1ರಿಂದ 28 ರವರೆಗೆ ಬಹಿರಂಗ ಹರಾಜು ನಡೆಸಲು ಒಮ್ಮತದ ಒಪ್ಪಿಗೆ ನೀಡಿದ ಸಭೆ, ಗೂಗಿಕಟ್ಟೆಯಲ್ಲಿರುವ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣದ ಒಂದನೇ ಮಹಡಿ ದುರಸ್ತಿಗೆ, ಎಂ.ಜಿ. ರಸ್ತೆಯಲ್ಲಿರುವ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿ ನಿರ್ಮಾಣಕ್ಕೆ ಹಾಗೂ ನಗರದ ಕುಡಿಯು ನೀರಿನ ಮುಖ್ಯ ಕೊಳವೆ ಮಾರ್ಗ ಮತ್ತು ಏರ್ ವಾಲ್ವ್‌ಗಳ ದುರಸ್ತಿಗೆ 15 ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಭೆ ನಿರ್ಧರಿಸಿತು.

ಅದೇ ರೀತಿ ಉದಯ ನಗರದಲ್ಲಿ ಸೋಮವಾರ ಸಂತೆ ನಡೆಸುವ ಬಗ್ಗೆ ಚರ್ಚೆ ನಡೆಸಿದ ಸಭೆ, ಮಂಗಳವಾರ ಸಂತೆ ನಡೆಸಲು ಒಪ್ಪಿಗೆ ಸೂಚಿಸಿತಲ್ಲದೇ, ನಾಗೇಂದ್ರನಮಟ್ಟಿನಲ್ಲಿ ಶುಕ್ರವಾರ ಸಭೆ ನಡೆಸಲು ಒಪ್ಪಿಗೆ ನೀಡಿತು.ನಾಗೇಂದ್ರನಮಟ್ಟಿಯ ನಾಲ್ಕನೇ ವಾರ್ಡಿನಲ್ಲಿ ಸಂತೆ ಪೇಟೆಗೆ ಬಿಟ್ಟ ಜಾಗೆಯಲ್ಲಿ ಹಿಂದಿನಿಂದ ಇದ್ದ ಜನರಿಗೆ ಪಟ್ಟಾ ವಿತರಣೆ ಮಾಡಬೇಕು. ಹೊಸದಾಗಿ ಮನೆ ನಿರ್ಮಿಸಿಕೊಂಡವರನ್ನು ಖಾಲಿ ಮಾಡಿಸಲು ನಿರ್ಧರಿಸಲಾಯಿತು.ಕಲಾವಿದ ಜ್ಯೂ.ರಾಜಕುಮಾರ ಅವರಿಗೆ ನಗರಸಭೆಯಿಂದ ಉಚಿತ ನಿವೇಶನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯೇ ಸಂತೆ...
ಇಲ್ಲಿನ ಉದಯ ನಗರ ಹಾಗೂ ನಾಗೇಂದ್ರನಮಟ್ಟಿಯಲ್ಲಿ ಸಂತೆ ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಾಗ, ಬಹುತೇಕ ಸದಸ್ಯರು ಏಕಕಾಲಕ್ಕೆ ತಮ್ಮ ವಿಚಾರ ಹೇಳಲು ಮುಂದಾದರು. ಇದರಿಂದ ಯಾರಿಗೂ ಏನೂ ಕೇಳದ ಸ್ಥಿತಿ ನಿರ್ಮಾಣವಾಯಿತು.ಆಗ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರು, ಬೇರೆ ಸಂತೆ ಬಗ್ಗೆ ಏಕೆ ಮಾತನಾಡುತ್ತೀರಿ, ನಗರಸಭೆ ಸಾಮಾನ್ಯ ಸಭೆಯ ಒಂದು ಸಂತೆಯಾಗಿದೆ. ಇಂತಹ ಸಂತೆ ಬಿಟ್ಟು ಬೇರೆ ಸಂತೆ ಅವಶ್ಯಕತೆ ಇದೆಯೇ ಎಂದು ಸದಸ್ಯರ ವರ್ತನೆ ಕುರಿತು ವ್ಯಂಗ್ಯವಾಡಿದರು.ಒಬ್ಬೊಬ್ಬರೇ ಮಾತನಾಡಿದರೆ, ಪ್ರತಿಯೊಬ್ಬರಿಗೂ ವಿಷಯ ತಿಳಿಯುತ್ತದೆ. ಎಲ್ಲರೂ ಏಕಕಾಲಕ್ಕೆ ಮಾತನಾಡಿದರೆ, ಯಾವುದೇ ವಿಷಯ ತಿಳಿಯದೇ ಗೊಂದಲ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.