ADVERTISEMENT

ಸರ್ಕಾರದ ನೀತಿಯಿಂದ ಭಿಕ್ಷುಕನಾದ ರೈತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 8:45 IST
Last Updated 2 ಫೆಬ್ರುವರಿ 2011, 8:45 IST

ಹಾವೇರಿ (ಹಾನಗಲ್ಲ): ಜೆ.ಎಚ್.ಪಟೇಲ್ ವೇದಿಕೆ: ‘ವ್ಯವಸ್ಥೆಯ ದ್ವಂದ್ವದಲ್ಲಿ ಸಿಲುಕಿರುವ ರೈತ ಸಮುದಾಯ ದಾರಿ ಕಾಣದಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಆ ಸಮುದಾಯಕ್ಕೆ ಸರಿಯಾದ ಮಾರ್ಗ ತೋರುವ ಅಗತ್ಯವಿದೆ’ ಎಂದು ರೈತ ಹೋರಾಟಗಾರ ಹಾಗೂ ಪ್ರಗತಿಪರ ರೈತ ಶಿವಾನಂದಯ್ಯ ಗುರುಮಠ ಅಭಿಪ್ರಾಯಪಟ್ಟರು.ಜಿಲ್ಲೆಯ ಹಾನಗಲ್ಲನಲ್ಲಿ ನಡೆದ ಜಿಲ್ಲಾ ಉತ್ಸವದ ಮೂರನೇ ದಿನವಾದ ಸೋಮವಾರ ನಡೆದ ಕೃಷಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದರು.

ಸರ್ಕಾರ ರೈತರಿಗೆ ಸಬ್ಸಿಡಿ ನೀಡುವ ಮೂಲಕ ಆತನನ್ನು ಭಿಕ್ಷುಕನನ್ನಾಗಿ ಮಾಡಿದೆ. ರೈತರು ಸಹ ಸರ್ಕಾರ ನೀಡುವ ಸಬ್ಸಿಡಿಗಾಗಿ ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ. ಸಬ್ಸಿಡಿ, ಉಚಿತ ಸೌಲಭ್ಯ ನೀಡುವುದಕ್ಕಿಂತ ಆತನನ್ನು ಸ್ವಾವಲಂಬಿ ರೈತನನ್ನಾಗಿ ಮಾಡುವುದು ಅವಶ್ಯವಿದೆ ಎಂದರು.ದೇಶದ ಆಹಾರ ಭದ್ರತೆಗಾಗಿ ಸರ್ಕಾರ ಹಸಿರು ಕ್ರಾಂತಿ ಘೋಷಣೆ ಮಾಡಿ,. ದೇಶದಲ್ಲಿ ಹೈಬ್ರಿಡ್ ತಳಿ ಹಾಗೂ ರಸಾಯನಿಕ ಗೊಬ್ಬರವನ್ನು ಪರಿಚಯಿಸಿತು. ಈಗ ಏಕಾಏಕಿ ಸಾವಯವ ಕೃಷಿಯತ್ತ ಒಲವು ತೋರುವಂತೆ ಮನವಿ ಮಾಡಿಕೊಳ್ಳುತ್ತಿದೆ. ಆದರೆ, ಸಾವಯವ ಕೃಷಿಯಿಂದ ದೇಶದ ಜನರಿಗೆ ಸಮರ್ಪಕ ಆಹಾರ ಪೂರೈಕೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ ಎಂದ ಅವರು, ಇದೀಗ ಆಹಾರ ಅಭದ್ರತೆ ಕಾಡುತ್ತಿದೆ.ಇಂತಹ ಸಂದರ್ಭದಲ್ಲಿ ಹೈಬ್ರಿಡ್‌ಗಿಂತ ಮುಂದುವರೆದ ಅಂದರೆ, ಬಿಟಿ ತಳಿಯಂತಹ ಬೀಜಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕ ಹಾಗೂ ಚೀನಾ ದೇಶಗಳು ಹಿಂದಿನಿಂದಲೂ ರಸಾಯನಿಕ ಹಾಗೂ ಹೈಬ್ರಿಡ್ ತಳಿಗಳನ್ನು ಬೆಳೆಯುತ್ತಿವೆ. ಅಲ್ಲಿನ ಹೊಲಗಳು ಈಗಲೂ ಉತ್ತಮ ಇಳುವರಿಯನ್ನು ನೀಡುತ್ತಿವೆ. ನಮ್ಮ ದೇಶದಲ್ಲಿ ಅಷ್ಟೇ ಏಕೆ ಜಮೀನುಗಳು ಹಾಳಾಗಿವೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಹೇಳಿದರು. ಕೃಷಿ ವಿಶ್ವ ವಿದ್ಯಾಲಯಗಳು ಉತ್ತಮ ಇಳುವರಿ ಬರುವ ಹೊಸ ತಳಿಗಳನ್ನು ಕಂಡು ಹಿಡಿದು ಅವುಗಳನ್ನು ರೈತರಿಗೆ ಪರಿಚಯಿಸುತ್ತಿವೆ. ಆದರೆ, ಸರ್ಕಾರ ಸಾವಯವದ ಕೆಲಸ ಮಾಡಿ ಎಂದು ಹೇಳುತ್ತಿದೆ. ಸರ್ಕಾರದ ದ್ವಂದ್ವ ನಿಲುವಿನಿಂದ ರೈತರಷ್ಟೆ ಅಲ್ಲ, ಕೃಷಿ ವಿಶ್ವ ವಿದ್ಯಾಲಯಗಳ ತಜ್ಞರು ಸಹ ಗೊಂದಲದಲ್ಲಿ ಸಿಲುಕಿದ್ದಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿ ಸಾಧ್ಯವೇ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕೆಲವಡೆ ಜಾನುವಾರಗಳಿದ್ದರೂ ಅವುಗಳನ್ನು ಮೇಯಿಸಲು ಜಾಗೆ ಇಲ್ಲ. ಜಾನುವಾರುಗಳು ಇಲ್ಲದಿದ್ದರೆ ಸಗಣೆ ಸಿಗುವುದಿಲ್ಲ. ಸಗಣಿ ಸಿಗದಿದ್ದರೆ, ಸಾವಯವ ಕೃಷಿ ಮಾಡಲು ಹೇಗೆ ಸಾಧ್ಯ ಎಂದು ಹೇಳಿದರು.

ಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ವೈ.ಬಂಡಿವಡ್ಡರ ನೀರು ನಿರ್ವಹಣೆ ಬಗ್ಗೆ, ಪತ್ರಕರ್ತ ಗಂಗಾಧರ ಹೂಗಾರ ತುಂಗಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದರು. ರೈತ ಮುಖಂಡ ಎ.ಎಸ್.ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಭೋಜರಾಜ ಪಾಟೀಲ ಮತ್ತಿತರರು ಹಾಜರಿದ್ದರು. ಪತ್ರಕರ್ತ ವಿಜಯ್ ಹೂಗಾರ ಸ್ವಾಗತಿಸಿದರು. ಬಿ.ಸಿ.ಮಾಕಳ್ಳಿ, ಮುಕ್ತೇಶ ಕುರಗುಂದಮಠ ಕಾರ್ಯಕ್ರಮ ನಿರೂಪಿಸಿದರು. ಶಂಕ್ರಗೌಡ್ರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.