ADVERTISEMENT

ಹದಗೆಟ್ಟ ರಸ್ತೆ, ಸೊಳ್ಳೆಗಳ ದರ್ಬಾರ್‌

ಮಾಲತೇಶ ಆರ್
Published 29 ನವೆಂಬರ್ 2017, 10:11 IST
Last Updated 29 ನವೆಂಬರ್ 2017, 10:11 IST
ತಿಳವಳ್ಳಿಯ ಬಿಸಿಎಂ ಹಾಸ್ಟೆಲ್‌ ಕಟ್ಟಡಕ್ಕೆ ಹೊಂದಿಕೊಂಡ ಚರಂಡಿ
ತಿಳವಳ್ಳಿಯ ಬಿಸಿಎಂ ಹಾಸ್ಟೆಲ್‌ ಕಟ್ಟಡಕ್ಕೆ ಹೊಂದಿಕೊಂಡ ಚರಂಡಿ   

ತಿಳವಳ್ಳಿ: ಗಬ್ಬು ನಾರುತ್ತಿರುವ ಚರಂಡಿಗಳು, ಮುಖ್ಯ ರಸ್ತೆಯಲ್ಲಿಯೇ ಮೊಳ ಉದ್ದದ ತಗ್ಗು–ಗುಂಡಿಗಳು, ಸಂಜೆಯಾಗುತ್ತಿದ್ದಂತೆಯೇ ಆವರಿಸುವ ಸೊಳ್ಳೆಗಳು... ಇದು ತಿಳವಳ್ಳಿ ಗ್ರಾಮದ ಹಲವು ವಾರ್ಡ್‌ಗಳಲ್ಲಿ ಕಂಡು ಬರುವ ನಿತ್ಯದ ಪಾಡು. ಸುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಜನರ ನಿತ್ಯದ ಒಡನಾಟ ಹೊಂದಿರುವ ತಿಳವಳ್ಳಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆ ಎನಿಸಿವೆ. ಶಾಲಾ–ಕಾಲೇಜು, ಆಸ್ಪತ್ರೆ ಸೇರಿದಂತೆ ಕಚೇರಿ ಕಾರ್ಯಗಳಿಗೆ ಬರುವ ಜನರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಓಡಾಡುತ್ತಾರೆ.

ಚರಂಡಿ ಸಮಸ್ಯೆ: ಗ್ರಾಮದ ಬಹುತೇಕ ಗಟಾರಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಹೀಗಾಗಿ ಚರಂಡಿಗಳು ಸೊಳ್ಳೆ ಉತ್ಪತ್ತಿಯ ತಾಣಗಳಾಗಿ ಮಾರ್ಪಟ್ಟಿವೆ. ‘ಗ್ರಾಮದ ಕೆಲವು ವಾರ್ಡ್‌ಗಳಲ್ಲಿ ಸರಿಯಾದ ಚರಂಡಿಗಳಿಲ್ಲದೇ ಕೊಳಚೆ ನಿಲ್ಲುವ ಸ್ಥಳಗಳು ಹೆಚ್ಚುತ್ತಲೇ ಇವೆ’ ಎಂಬುದು ದ್ಯಾಮವ್ವನ ಓಣಿ ನಿವಾಸಿ ಸಂತೋಷ ಅವರ ಆರೋಪ.

‘ಗ್ರಾಮದಲ್ಲಿ ಕೊಳಚೆ ಪ್ರದೇಶ ಹೆಚ್ಚಾಗಿ ಸೊಳ್ಳೆಗಳ ಕಾಟ ಶುರುವಾಗಿದೆ. ಅದರಿಂದ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳ ಭೀತಿ ಆವರಿಸಿದೆ. ಆದರೆ, ಗ್ರಾಮ ಪಂಚಾಯ್ತಿಯವರು ಊರಿನ ಜನರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಭರಮಣ್ಣ ಕುರುಬರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

‘ಗ್ರಾಮದ 4ನೇ ವಾರ್ಡ್‌ನ ಬ್ರಾಹ್ಮಣರ ಓಣಿಯಲ್ಲಿರುವ ಬಿಸಿಎಂ ಹಾಸ್ಟೆಲ್ ಕಟ್ಟಡಕ್ಕೆ ಹೊಂದಿಕೊಂಡಿರುವ ಚರಂಡಿ ಗಬ್ಬು ನಾರುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ಓದಲು ಕಷ್ಟವಾಗುತ್ತಿದೆ. ಅಷ್ಟೇ ಅಲ್ಲದೇ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ, ಆದ್ದರಿಂದ, ಪಂಚಾಯ್ತಿ ವತಿಯಿಂದ ಶೀಘ್ರವೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂಬುದು ಹಾಸ್ಟೇಲ್‌ ವಿದ್ಯಾರ್ಥಿಗಳ ಆಗ್ರಹ.

ಹಂದಿಗಳ ಹಾವಳಿ: ಗ್ರಾಮದಲ್ಲಿ ಎಲ್ಲಿಯೂ ಕಸದ ತೊಟ್ಟಿಗಳೇ ಕಾಣುವುದಿಲ್ಲ. ಹೀಗಾಗಿ, ಅಂಗಡಿಗಳ ತ್ಯಾಜ್ಯವನ್ನು ಸಿಕ್ಕ–ಸಿಕ್ಕಲ್ಲಿ ಸುರಿಯಲಾಗುತ್ತಿದೆ. ಆ ಕಸವನ್ನು ಹಂದಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಅದರಿಂದ ಗಲೀಜು ಮತ್ತಷ್ಟು ಹೆಚ್ಚುತ್ತಿದೆ. ಹೀಗಾಗಿ ಕಸದ ಸಮರ್ಪಕ ನಿರ್ವಹಣೆಗೆ ಪಂಚಾಯ್ತಿ ವತಿಯಿಂದ ಅಗತ್ಯ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ನಿರ್ಮಿಸಬೇಕು’ ಎಂಬುದು ಸ್ಥಳೀಯರ ಆಗ್ರಹ.

* * 

ಗ್ರಾಮದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾದ ಬಗ್ಗೆ ಮಾಹಿತಿ ಬಂದಿದೆ. ಫಾಗಿಂಗ್‌ ಮಾಡುವ ಬಗ್ಗೆ ಸದಸ್ಯರೊಂದಿದೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು
ಕುಮಾರ ಮಕರವಳ್ಳಿ
ತಿಳವಳ್ಳಿ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.