ADVERTISEMENT

ಹಾವೇರಿ | ಕೋವಿಡ್ ಗೆದ್ದವರ ಕಥೆಗಳು: ಸೋಂಕಿತರ ಮನ ನೋಯಿಸಬೇಡಿ

ಸಿದ್ದು ಆರ್.ಜಿ.ಹಳ್ಳಿ
Published 29 ಜುಲೈ 2020, 16:59 IST
Last Updated 29 ಜುಲೈ 2020, 16:59 IST
ಜ್ಯೋತಿ ಬಿ.ಎಸ್‌., ಲ್ಯಾಬ್‌ ಟೆಕ್ನೀಶಿಯನ್‌
ಜ್ಯೋತಿ ಬಿ.ಎಸ್‌., ಲ್ಯಾಬ್‌ ಟೆಕ್ನೀಶಿಯನ್‌   

ಹಾವೇರಿ: ‘ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದ್ರೂ ನೆಮ್ಮದಿ ಸಿಗುತ್ತಿಲ್ಲ. ಏಕೆಂದರೆ ಕೆಲವು ಜನರು ಮಾನವೀಯತೆ ಮರೆತು ಕುಹಕದ ಮಾತುಗಳನ್ನಾಡುತ್ತಾರೆ. ಇದು ಬಹಳ ನೋವು ಕೊಡುತ್ತದೆ’ ಎನ್ನುತ್ತಾರೆ ಕೋವಿಡ್‌ ಗೆದ್ದು ಬಂದ ಅಕ್ಕಿಆಲೂರಿನ ಲ್ಯಾಬ್‌ ಟೆಕ್ನೀಶಿಯನ್‌ ಜ್ಯೋತಿ ಬಿ.ಎಸ್‌.

ಕುಟುಂಬ ತೊರೆದು, ಆರೋಗ್ಯ ಲೆಕ್ಕಿಸದೆ, ರಜೆ ತೆಗೆದುಕೊಳ್ಳದೆ ನಿರಂತರವಾಗಿ ಸೋಂಕಿತರ ಸೇವೆ ಮಾಡುತ್ತಿದ್ದಾರೆ ‘ಕೊರೊನಾ ವಾರಿಯರ್ಸ್‌’. ಹೀಗೆ ಸೋಂಕಿತರ ತಪಾಸಣೆ, ಚಿಕಿತ್ಸೆ ಕಾರ್ಯಗಳಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗೆ ಯಾವಾಗ ಬೇಕಾದರೂ ಸೋಂಕು ತಗುಲಬಹುದು ಎಂಬುದು ಗೊತ್ತಿರುತ್ತದೆ. ಆದರೂ, ‘ಕರ್ತವ್ಯವೇ ದೇವರು’ ಎಂದು ಸ್ವಹಿತ ಮರೆತು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಇಂಥವರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು.

ಮುನ್ನೆಚ್ಚರಿಕಾ ಕ್ರಮವಾಗಿ ನಾನು ಜುಲೈ 3ರಂದು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡೆ. ಜುಲೈ 8ರಂದು ವರದಿ ಪಾಸಿಟಿವ್‌ ಬಂದಿತು. ನಮ್ಮದು 32 ಮಂದಿಯಿರುವ ಅಭಿಭಕ್ತ ಕುಟುಂಬ. ಎಲ್ಲರೂ ಧೈರ್ಯ ತುಂಬಿ ಆಸ್ಪತ್ರೆಗೆ ಕಳುಹಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿದರು. ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಶೀಘ್ರ ಗುಣಮುಖಳಾಗಿ ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾದೆ.

ADVERTISEMENT

ಸೋಂಕಿನ ಲಕ್ಷಣಗಳಿದ್ದ ಇಬ್ಬರು ವ್ಯಕ್ತಿಗಳ ರಕ್ತದೊತ್ತಡ ಮತ್ತು ಮಧುಮೇಹವನ್ನು ಪರೀಕ್ಷಿಸಿದ್ದೆ. ನಂತರ ಅವರಿಗೆ ಕೋವಿಡ್‌ ದೃಢವಾಯಿತು. ಬಹುಶಃ ಇಲ್ಲಿ ಸೋಂಕು ತಗುಲಿರಬಹುದು ಎಂಬುದು ನನ್ನ ಊಹೆ. ಕೆಲವು ಬಾರಿ ನಾವು (ವೈದ್ಯಕೀಯ ಸಿಬ್ಬಂದಿ) ಎಷ್ಟೇ ಸುರಕ್ಷತಾ ಸಾಧನಗಳನ್ನು ಬಳಸಿದರೂ ಸೋಂಕು ತಗುಲುತ್ತದೆ. ಆದರೆ, ಸೋಂಕು ಬರುತ್ತದೆ ಎಂಬ ಭಯದಿಂದ ವೈದ್ಯರು, ಶುಶ್ರೂಷಕಿಯರು, ಲ್ಯಾಬ್ ಟೆಕ್ನೀಶಿಯನ್‌ಗಳು ಮನೆಯಲ್ಲಿ ಕೂತರೆ ಜನಸಾಮಾನ್ಯರ ಗತಿಯೇನು?

ಸೋಂಕಿನ ಲಕ್ಷಣಗಳು ಕಂಡು ಬಂದರೆ, ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಕ್ವಾರಂಟೈನ್‌ನಲ್ಲಿರುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿ. ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಎಲ್ಲರೂ ಪಣ ತೊಡಬೇಕಿದೆ. ಆತ್ಮಸ್ಥೈರ್ಯ, ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳಿ ಎಂಬುದು ನನ್ನ ಮನವಿ ಎನ್ನುತ್ತಾರೆ ಜ್ಯೋತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.