ADVERTISEMENT

‘ಆತ್ಮಹತ್ಯೆಗೀಡಾದ ರೈತರ ಮಕ್ಕಳಿಗೆ ಉಚಿತ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ಹಾವೇರಿಯ ಹುಕ್ಕೇರಿ ಮಠದ  ಜಾತ್ರಾ ಮಹೋತ್ಸವದ ದಾಸೋಹಕ್ಕಾಗಿ ಭಕ್ತರು ನೀಡಿದ ರೊಟ್ಟಿಯನ್ನು ಸ್ವೀಕರಿಸಿದ ಸದಾಶಿವ ಸ್ವಾಮೀಜಿ
ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ದಾಸೋಹಕ್ಕಾಗಿ ಭಕ್ತರು ನೀಡಿದ ರೊಟ್ಟಿಯನ್ನು ಸ್ವೀಕರಿಸಿದ ಸದಾಶಿವ ಸ್ವಾಮೀಜಿ   

ಹಾವೇರಿ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ ರೈತರ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಇಲ್ಲಿನ ಹುಕ್ಕೇರಿಮಠದಲ್ಲಿ ನಡೆಯುತ್ತಿರುವ ಶಿವಬಸವ ಸ್ವಾಮೀಜಿಗಳ 70ನೇ ಮತ್ತು ಶಿವಲಿಂಗ ಶ್ರೀಗಳ 7ನೇ ಸ್ಮರಣೋತ್ಸವ ಅಂಗವಾಗಿ ಸೋಮವಾರ ನಡೆದ ‘ರೈತಗೋಷ್ಠಿ’ಯಲ್ಲಿ ಈ ವಿಷಯ ತಿಳಿಸಿದ ಅವರು, ಇನ್ನು ಮುಂದೆ ಮಠದಲ್ಲಿ ಪ್ರತಿ ವರ್ಷವೂ ಕೃಷಿ ಪರ ಚಿಂತನೆಯ ಗೋಷ್ಠಿ ನಡೆಸುವುದಾಗಿ ಹೇಳಿದರು.

‘ಆತ್ಮಹತ್ಯೆ, ಬರ ಪರಿಸ್ಥಿತಿಯಿಂದಾಗಿ ಜಿಲ್ಲೆಯ ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಅದಕ್ಕಾಗಿ ನಾವು ಈ ಬಾರಿ ‘ರೊಟ್ಟಿ ಜಾತ್ರೆ’ (ರೈತರಿಂದ ಜಾತ್ರೆಗೆ ರೊಟ್ಟಿ ಕೊಡುಗೆ)ಯನ್ನೂ ನಡೆಸಿಲ್ಲ. ಆದರೂ ಕೆಲವು ರೈತರು ರೊಟ್ಟಿ, ಧಾನ್ಯವನ್ನು ನೀಡಿದ್ದಾರೆ. ಅನ್ನದಾತರದ್ದು ಇನ್ನೊಬ್ಬರ ಹಸಿವು ನೀಗಿಸುವ ಕಾಯಕ.  ಹೀಗಾಗಿ ಅದನ್ನೆಲ್ಲ ದಾಸೋಹಕ್ಕೆ ಬಳಸಲಾಗುವುದು’ ಎಂದರು.

‘ಬೆಲೆ ನೋಡಿ ಕೃಷಿ ಕಾಯಕ ಮಾಡಬೇಡಿ. ಹಣದ ಆಸೆಗಾಗಿ ಒಂದೇ ಬೆಳೆಗೆ ಮೊರೆ ಹೋಗದಿರಿ. ಬೆಳೆಗಳಲ್ಲಿ ವೈವಿಧ್ಯವಿದ್ದಾಗ ಒಂದು ನಷ್ಟವಾದರೆ, ಮತ್ತೊಂದು ಲಾಭ ಕೊಡುತ್ತದೆ. ಎರಡೂ ನಷ್ಟವಾದರೆ, ಮೂರನೇ ಬೆಳೆ ಕೈ ಹಿಡಿಯುತ್ತದೆ. ನೀವು ಪರಿಸರಸ್ನೇಹಿ ಕೃಷಿ ಮಾಡಿದಾಗ ಭೂಮಿ ಬರಡಾಗುವುದಿಲ್ಲ. ಬೆವರು ಹರಿಸಿದವರನ್ನು ಭೂಮಿ ತಾಯಿ ಕೈ ಬಿಡುವುದಿಲ್ಲ’ ಎಂದು ರೈತರಿಗೆ ಕಿವಿಮಾತು ಹೇಳಿದರು.

ಹರಸೂರು ಬಣ್ಣದಮಠದ ರುದ್ರಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಕ್ಕಿ ಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಹುಬ್ಬಳ್ಳಿ ದಾನೇಶ್ವರ ದೇವರು, ಕೂಡಲ ಮಹೇಶ್ವರ ದೇವರು, ವೀರೇಶ್ವರ ದೇವರು, ರೈತ ಮುಖಂಡರಾದ ಕೆ.ಟಿ. ಗಂಗಾಧರಯ್ಯ,  ವೀರಸಂಗಯ್ಯ, ರಾಮಣ್ಣ ಕೆಂಚಳ್ಳೇರಿ, ಶಿವಬಸವಗೋವಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಎಂ.ಎಚ್‌. ಪಾಟೀಲ್‌, ಮುತ್ತಣ್ಣ ಪೂಜಾರ, ಪರಮೇಶ್ವರಯ್ಯ ಸಾಲಿಮಠ, ಪ್ರಾಚಾರ್ಯ ಬಿ. ಬಸವರಾಜ, ಅಂದಾನೆಪ್ಪ ಗಡಾದ, ಎಸ್‌.ಜಿ. ಪಾಟೀಲ್‌, ಗಂಗಮ್ಮ ಯರೇಶಿಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.