ADVERTISEMENT

‘ಚುನಾವಣೆ ಹಿಂದಿನಷ್ಟು ಸುಲಭವಲ್ಲ’

ಜನರ ಒಲವು ಗಳಿಸಲು ಕಾರ್ಯಕರ್ತರಿಗೆ ಬಿಎಸ್‌ವೈ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 9:40 IST
Last Updated 14 ಫೆಬ್ರುವರಿ 2014, 9:40 IST
ಹಾವೇರಿ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.
ಹಾವೇರಿ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.   

ಹಾವೇರಿ: ‘ಮುಂಬರುವ ಲೋಕಸಭೆ ಚುನಾವಣೆ ಹಿಂದಿನ ಲೋಕಸಭೆ ಚುನಾವಣೆಯಂತೆ ಬಿಜೆಪಿಗೆ ಪೂರಕವಾಗಿಲ್ಲ. ಕಾರ್ಯಕರ್ತರು ಈಗಿನಿಂದಲೇ ಶ್ರಮವಹಿಸಿ ಹಗಲಿರಳು ಕೆಲಸ ಮಾಡಿದಾಗ ಮಾತ್ರ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಇಲ್ಲಿನ ಮುನ್ಸಿಪಲ್ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡ ‘ಭಾರತ ಗೆಲ್ಲಿಸಿ’ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಶಕ್ತಿ, ಬಿಜೆಪಿ ಗಾಳಿ ಇತ್ತು. ಈ ಚುನಾವಣೆಯಲ್ಲಿ ಅದಕ್ಕೆ ವಿರುದ್ಧವಾದ ವಾತವರಣವಿದೆ. ಹೀಗಾಗಿ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದರ ಜತೆಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸಂಕಲ್ಪ ಮಾಡಬೇಕು ಎಂದು ಸಲಹೆ ಮಾಡಿದರು.

ಎದುರಾಳಿ ಸ್ಪರ್ಧಿ ಯಾರೇ ಆದರೂ, ಯಾರನ್ನೂ ಕೂಡಾ ಹಗುರವಾಗಿ ಕಾಣಬಾರದು. ಚುನಾವಣೆಯಲ್ಲಿ ನಾಯಕರು ನೆಪ ಮಾತ್ರದ ಪಾತ್ರ. ಜನರ ಮುಂದೆ ನಿತ್ಯ ಹೋಗುವ ಕಾರ್ಯಕರ್ತರೇ ನಿಜವಾದ ನಾಯಕರು.  ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ವಿಶ್ವಾಸ ಗಳಿಸಬೇಕು ಮತ್ತು ಅವರನ್ನು ಬಿಜೆಪಿಯತ್ತ ಕರೆ ತರಬೇಕು ಎಂದು ಹೇಳಿದರು.

ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ ಅಹಿಂದ ಮೂಲಕ ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಒಂದೇ ಒಂದು ಕೋಮುಗಲಭೆ ಆಗಿಲ್ಲ. ಇವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮೋದಿ ಪಿಎಂ ಅಭ್ಯರ್ಥಿ ಜನರ ನಿರ್ಧಾರ: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿಲ್ಲ. ಅವರನ್ನು ಪಿಎಂ ಅಭ್ಯರ್ಥಿ ಎಂದು ಮೊದಲು ತೀರ್ಮಾನಮಾಡಿರುವುದು ದೇಶದ ಶೇ ೭೦ರಷ್ಟು ಜನರು. ಇದು ದೇಶದ ಇತಿಹಾಸ ದಲ್ಲಿಯೇ ಅಪರೂಪದ ಪ್ರಸಂಗ ಎಂಬುದನ್ನು ಯಾವುದೇ ಸಂಕೋಚವಿಲ್ಲದೇ ಹೇಳುತ್ತೇನೆ ಎಂದರು.

ಚರ್ಚೆಗೆ ಬನ್ನಿ:  ತಮ್ಮ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ₨  ೯೦೦ ಕೋಟಿ ನೀಡಿ ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸಲಾಗಿದೆ. ಕೆಸಿಸಿ ಬ್ಯಾಂಕ್‌ಗಾಗಿ ₨ ೩೦ ಕೋಟಿ, ಧಾರವಾಡ ಹಾಲು ಒಕ್ಕೂಟದ ₨ ೨೨ ಕೋಟಿ  ಸಾಲ ಮನ್ನಾ ಮಾಡಿ ಪುನರುಜ್ಜೀವನ ಗೊಳಿಸಲಾಗಿದೆ.

ಅದು ಅಲ್ಲದೇ ಗಂಗಾ ಕಲ್ಯಾಣ ಯೋಜನೆಯಲ್ಲಿ ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ 20 ಸಾವಿರಕ್ಕೂ ಹೆಚ್ಚು ಬೋರವೆಲ್‌ ಕೊರೆಸಿದ್ದೇವೆ. ಆದರೆ, ಕಾಂಗ್ರೆಸ್‌ ಸರ್ಕಾರ ಒಂದು ವರ್ಷದಲ್ಲಿ ಕೇವಲ 661 ಬೋರವೆಲ್‌ ಕೊರೆಸಿದೆ. ಅದೇ ರೀತಿ ಎರಡು ವರ್ಷದಲ್ಲಿ ಐದು ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್‌ ವಿತರಿಸಿದರೆ, ಕಾಂಗ್ರೆಸ್‌ ಕೇವಲ 1.4 ಲಕ್ಷ ಬಾಂಡ್‌ ವಿತರಿಸಿದೆ. ಈ ಎಲ್ಲ ಅಂಕಿ ಅಂಶಗಳು ಸುಳ್ಳಾದರೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿಗಳಿಗೆ ಯಡಿಯೂರಪ್ಪ ಸವಾಲು ಹಾಕಿದರು.

ತಮ್ಮ ಅಧಿಕಾರವಧಿಯಲ್ಲಿ ತೆರಿಗೆ ಸೋರಿಕೆ ತಡೆದು ಖಜಾನೆ ತುಂಬಿಸಿದ್ದಲ್ಲದೇ, ₨ 35 ಸಾವಿರ ಕೋಟಿ ಇದ್ದ ರಾಜ್ಯ ಬಜೆಟ್‌ನ್ನು 1 ಲಕ್ಷ ಕೋಟಿಗೆ ಹೆಚ್ಚಿಸಿದ್ದೇನೆ. ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ವರ್ಷವಾಗಿದೆ. ಗುಂಡಿ ಮುಚ್ಚುವ ಯೋಗ್ಯತೆಯೂ ಇಲ್ಲದಂತಾಗಿದೆ. ಈ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗಿದರು.

ಹಿಂಬರಕಿ ಸರ್ಕಾರ: ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಚಿಸದೆ ಯೋಜನೆಗಳನ್ನು ಘೋಷಿಸಿಸುವುದು. ಬಳಿಕ ಹಿಂಪಡೆಯುವ ಮೂಲಕ ಇದೊಂದು ಹಿಂಬರಕಿ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಟೀಕಿಸಿದರು.

ಯೋಜನೆಗಳನ್ನು ಘೋಷಣೆ ಮಾಡುವುದು ನಂತರ ಅದಕ್ಕೆ ಜನರಿಂದ ವಿರೋಧ ಬಂದ ತಕ್ಷಣ ವಾಪಸ್ಸು ಪಡೆಯುವುದು ನಡೆಯುತ್ತಿದೆ. ಹೀಗಾಗಿ ಈ ಸರ್ಕಾರವನ್ನು ಕಿತ್ತೆಸೆಯಲು ಮುಂದಿನ ಲೋಕಸಭೆ ಚುನಾವಣೆ ಸುವರ್ಣ ಅವಕಾಶ ಕಲ್ಪಿಸಿದೆ ಎಂದರು.

ಕಳೆದ ಒಂಬತ್ತು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ, ಕೆಜೆಪಿ ಒಂದಾಗಿದ್ದು, ಕಾಂಗ್ರೆಸ್‌ನಲ್ಲಿ ನಡುಕ ಆರಂಭವಾಗಿದೆ. ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿದರೆ, ಕಾಂಗ್ರೆಸ್ ಸರ್ಕಾರ ತಾನಾಗಿಯೇ ಹೋಗಲಿದೆ ಎಂದರು.

ವೇದಿಕೆಯಲ್ಲಿ ಸಂಸದ, ಅಭ್ಯರ್ಥಿ ಶಿವಕುಮಾರ ಉದಾಸಿ, ಶಾಸಕ ಯು.ಬಿ. ಬಣಕಾರ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ಕಳಕಪ್ಪ ಬಂಡಿ, ವಿ.ಎಸ್. ಪಾಟೀಲ, ಜಿ. ಶಿವಣ್ಣ, ಸುರೇಶಗೌಡ ಪಾಟೀಲ, ಮೋಹನ ಲಿಂಬಿಕಾಯಿ, ರಾಮಣ್ಣ ಲಮಾಣಿ, ಜಿಲ್ಲಾ ಘಟಕದ ಅಧ್ಯಕ್ಷ ಭೋಜರಾಜ ಕರೂದಿ, ಸಿದ್ದರಾಜು ಕಲಕೋಟಿ, ಸುರೇಶ ಹೊಸಮನಿ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.