ADVERTISEMENT

‘ಪ್ರಸವಪೂರ್ವ ಲಿಂಗಪತ್ತೆ ಆತಂಕಕಾರಿ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:09 IST
Last Updated 11 ಡಿಸೆಂಬರ್ 2013, 6:09 IST

ಸವಣೂರು :  ಸುಶಿಕ್ಷಿತ ಕುಟುಂಬಗಳಲ್ಲಿಯೇ  ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಪ್ರವೃತ್ತಿ ಅಧಿಕವಾಗಿದ್ದು, ಇದು ನಾಗರೀಕ ಸಮಾಜಕ್ಕೆ ಅವಮಾನಕರ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಚಿದಾನಂದ ಬಡಿಗೇರ ತಿಳಿಸಿದರು. ಸವಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಅಡಿ, ವಿವಿದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗಾಗಿ ಗರ್ಭ ಪೂರ್ವ, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಾಸನ ೧೯೯೪ರ ಕುರಿತಾದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಮಗುವನ್ನು ಒಂದು ವರದಾನ ಎಂದು ಸಮಾನ ಮನಃಸ್ಥಿತಿಯಿಂದ ಸ್ವೀಕರಿಸಿ ಎಂದು ಅವರು ಸಲಹೆ ನೀಡಿದರು. 

ಅಧ್ಯಕ್ಷತೆಯನ್ನು ಪ್ರಭಾರಿ ವೈದ್ಯಾಧಿಕಾರಿ ಡಾ. ಅಜಿತ್ ಕುಲಕರ್ಣಿ ವಹಿಸಿದ್ದರು. ಗರ್ಭಪೂರ್ವ, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಾಸನ ೧೯೯೪ರ ಕುರಿತು ವಕೀಲ ಎಂ.ಎನ್ ರಡ್ಡೆರ ಉಪನ್ಯಾಸ ನೀಡಿದರು.   ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಜಿಲಾನಿ ನವಲಗುಂದ,  ಏಡ್ಸ್  ರೋಗದ ಬಗ್ಗೆ ಮಾಹಿತಿ ನೀಡಿದರು. 

ಜಿಲ್ಲಾ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಫ್ ಕುರವಳ್ಳಿ,  ಗರ್ಭಿಣಿ ಸ್ತ್ರೀಯರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ  ನೀಡಿದರು. ಮಹಿಳಾ ಸ್ವ ಸಹಾಯ ಸಂಘಗಳ ಅಧ್ಯಕ್ಷೆ ಶೋಭಾ ಪಾಟೀಲ, ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕರಾದ ಪಿ.ಎಲ್ ಪೂಜಾರ ಹಾಗೂ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.