ADVERTISEMENT

‘ಮಾದಕ ವಸ್ತುಗಳಿಗೆ ಯುವಜನತೆ ಬಲಿಯಾಗದಿರಲಿ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 7:05 IST
Last Updated 3 ಮಾರ್ಚ್ 2014, 7:05 IST
‘ಮಾದಕ ವಸ್ತುಗಳಿಗೆ ಯುವಜನತೆ ಬಲಿಯಾಗದಿರಲಿ’
‘ಮಾದಕ ವಸ್ತುಗಳಿಗೆ ಯುವಜನತೆ ಬಲಿಯಾಗದಿರಲಿ’   

ಹಾವೇರಿ: ಯುವಕರು ಮದ್ಯ, ಬಿಡಿ, ಸಿಗರೇಟ್‌ ಸೇರಿದಂತೆ ಇತ್ಯಾದಿ ಮಾದಕ ವಸ್ತುಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಕಳೆದುಕೊಳ್ಳದೇ, ಸದೃಢ ದೇಹ ಹಾಗೂ ಮನಸ್ಸು ಹೊಂದಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿ.ಪಂ. ಸದಸ್ಯೆ ವಿರೇಶ್ವರಿ ಸುಳ್ಳಳ್ಳಿ ಹೇಳಿದರು.

ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಅನ್ನಪೂರ್ಣ ಆಸ್ಪತ್ರೆಯ ಮಾದಕ ವಸ್ತುಗಳ ಪುನರ್‌ ವಸತಿ ಕೇಂದ್ರ ಮತ್ತು ಕರ್ಜಗಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಂದರವಾದ ಬದುಕು ಕಟ್ಟಿಕೊಳ್ಳಬೇಕಾದ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದಾಗ ಪಾಲಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ತಿದ್ದಿ ಬುದ್ದಿ ಹೇಳಿ ಸರಿಯಾದ ದಾರಿಯಲ್ಲಿ ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ತಾ.ಪಂ.ಸದಸ್ಯೆ ಬಸವಣ್ಣೆವ್ವ ಹಿರೇಮಠ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಕ್ಕೆ ಅಂಟಿಕೊಂಡವರು ಮಾದಕ ವಸ್ತು ಸೇವನೆಗಳ ಪುನರ್‌ ವಸತಿ ಕೇಂದ್ರದ ಅಧಿಕಾರಿಗಳ ಸಲಹೆ, ಸೂಚನೆಯಂತೆ ನಡೆದ ಮಾದಕ ವಸ್ತುಗಳನ್ನು ಸೇವಿಸುವುದು ಬಿಡಬೇಕು ಎಂದರು.

ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೇವಲ ಒಂದು ಹಳ್ಳಿಗೆ ಸೀಮಿತಗೊಳ್ಳದೇ, ರಾಜ್ಯದ ಎಲ್ಲ ಹಳ್ಳಿಗಳ್ಳಲಿಯೂ ನಡೆದಾಗ ಮಾತ್ರ ಕರ್ನಾಟಕ ಮಾದಕ ವಸ್ತು ಮುಕ್ತ ರಾಜ್ಯವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರ ವಿದ್ಯಾಲಯದ ಲೀಲಾಜಿ ಅಕ್ಕ, ಹನುಮಂತಪ್ಪ ಹಾಗೂ ಕರ್ಜಗಿ ಪ್ರೌಢ ಶಾಲೆ ಉಪನ್ಯಾಸಕ ಮಾತನಾಡಿದರು.

ಜಾಗೃತಿ ಜಾಥಾದಲ್ಲಿ ಅನ್ನಪೂರ್ಣ ಆಸ್ಪತ್ರೆಯ ವ್ಯವಸ್ಥಾಪಕ ಸಿ.ಎಂ. ಕೊಟ್ರೇಶ, ಶಿಲ್ಪಾ ಪಾರಮ್ಮನವರ, ಶಿವಗಂಗಾ ಪೂಜಾರ, ಗ್ರಾಮದ ಅನೇಕ ಗಣ್ಯರು ,  ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು.  ರಮೇಶ ಸ್ವಾಗತಿಸಿದರು. ಪುಟ್ಟಪ್ಪ  ನಿರೂಪಿಸಿದರು. ಅಂಜನಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.