ADVERTISEMENT

₹ 3,046 ಸಾವಿರ ಕೋಟಿ ಕೃಷಿ ಸಾಲ

ಹಾವೇರಿ ಜಿಲ್ಲೆಯಲ್ಲಿ ಕೃಷಿ ಕುಟುಂಬಗಳೇ ಜಾಸ್ತಿ: ಶುರುವಾಗಿದೆ ಸಾಲ ಮನ್ನಾದ ಲೆಕ್ಕಾಚಾರ

ಹರ್ಷವರ್ಧನ ಪಿ.ಆರ್.
Published 5 ಜುಲೈ 2018, 17:57 IST
Last Updated 5 ಜುಲೈ 2018, 17:57 IST
ಅತ್ತ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡುತ್ತಿದ್ದರೆ, ಇತ್ತ ಹಾವೇರಿ ಹೊರವಲಯ ಹೊಲದಲ್ಲಿ ರೈತರು ತುಂತುರು ಮಳೆಯಲ್ಲೂ ಕೃಷಿ ಕಾಯಕದಲ್ಲಿ ನಿರತರಾಗಿದ್ದರು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ 
ಅತ್ತ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡುತ್ತಿದ್ದರೆ, ಇತ್ತ ಹಾವೇರಿ ಹೊರವಲಯ ಹೊಲದಲ್ಲಿ ರೈತರು ತುಂತುರು ಮಳೆಯಲ್ಲೂ ಕೃಷಿ ಕಾಯಕದಲ್ಲಿ ನಿರತರಾಗಿದ್ದರು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ    

ಹಾವೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ₹ 2 ಲಕ್ಷ ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದು, ಇದರ ಲಾಭವು ಜಿಲ್ಲೆಯ ಎಷ್ಟು ರೈತರಿಗೆ ದಕ್ಕಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

2017ರ ಡಿ. 31ರವರೆಗಿನ ₹ 2 ಲಕ್ಷತನಕ ಸಾಲವನ್ನು ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದು ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘಗಳು ಸೇರಿ ಎಲ್ಲದಕ್ಕೂ ಅನ್ವಯಿಸಲಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯಲ್ಲಿ 3.83ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿಯಿದ್ದು, 2011ರ ಜನಗಣತಿಯಂತೆ 2.18 ಲಕ್ಷ ರೈತ ಕುಟುಂಬಗಳಿವೆ. ಒಟ್ಟು ₹ 3,046 ಕೋಟಿ ಸಾಲ ನೀಡಲಾಗಿದೆ.

2016ರ ಡಿ. 6ರಂದು ನಡೆದಿದ್ದ ‘ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆ’ಯಲ್ಲಿ 2017–18ನೇ ಸಾಲಿಗೆ ಜಿಲ್ಲೆಗೆ ಮಳೆಯಾಧರಿತ ಮತ್ತು ನೀರಾವರಿ ಬೆಳೆಸಾಲ ನಿಗದಿ ಪಡಿಸಲಾಗಿತ್ತು. 27 ಕೃಷಿ ಬೆಳೆ, 3 ಮಿಶ್ರ ಬೆಳೆ, 13 ಬೀಜೋತ್ಪಾದನಾ ಬೆಳೆ, 9 ಹಣ್ಣು ಹಂಪಲು, 3 ಪ್ಲಾಂಟೇಶನ್ ಕ್ರಾಪ್ (ತೋಟ), 8 ಹೂವುಗಳು, 30 ತರಕಾರಿ ಕಾಯಿಪಲ್ಲೆಗಳಿಗೆ ಎಕರೆಗೆ ಬೆಳೆಸಾಲ ನಿರ್ಧರಿಸಲಾಗಿತ್ತು.

ADVERTISEMENT

ಈ ಪೈಕಿ ಒಂದು ಎಕರೆ ರಾಗಿಗೆ ₹ 4 ಸಾವಿರದಿಂದ ದ್ರಾಕ್ಷಿಗೆ ₹ 75 ಸಾವಿರ ತನಕ ಬೆಳೆ ಸಾಲ ನಿಗದಿಯಾಗಿತ್ತು. ಇದರ ಆಧಾರದಲ್ಲಿ ಕ್ಷೇತ್ರ ವ್ಯಾಪ್ತಿಗೆ ತಕ್ಕಂತೆ ರೈತರು ಬೆಳೆಗಳಿಗೆ ಸಾಲ ಪಡೆದಿದ್ದರು. (2018–19ನೇ ಸಾಲಿನ ಬೆಳೆ ಸಾಲದ ಮಿತಿಯನ್ನು 2017 ಡಿ. 15ರ ಸಭೆಯಲ್ಲಿ ನಿರ್ಧರಿಸಲಾಗಿದೆ)

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ಸಂಘಗಳಲ್ಲಿರುವ ₹ 50 ಸಾವಿರ ತನಕದ ಬೆಳೆ ಸಾಲವನ್ನು ಮನ್ನಾ ಮಾಡಿದ್ದರು. ಇದರಿಂದ ಜಿಲ್ಲೆಯ 35,106 ರೈತರ ₹ 106.45 ಕೋಟಿ ಸಾಲ ಮನ್ನಾ ಆಗಿತ್ತು. ಈ ಪೈಕಿ ಸುಮಾರು ₹51.21 ಕೋಟಿಯನ್ನು ಸರ್ಕಾರವು ಈ ತನಕ ಸಂಘಗಳಿಗೆ ಮರುಪಾವತಿಸಿದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿಯೇತರ ಸೇರಿ ಒಟ್ಟು 970 ಸಹಕಾರ ಸಂಘಗಳು ಇವೆ.

‘ಮುಖ್ಯಮಂತ್ರಿಗಳು ಈ ಹಿಂದೆ ಭರವಸೆ ನೀಡಿದಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು. ಈಗ ಮಿತಿ ನಿಗದಿಪಡಿಸಿರುವುದು ಸರಿ ಅಲ್ಲ. ಅಲ್ಲದೇ, ಕೇವಲ ಬೆಳೆಸಾಲ ಮಾತ್ರ ಮನ್ನಾ ಮಾಡಿದ್ದು, ಕೃಷಿ ಪೂರಕವಾದ ಟ್ರ್ಯಾಕ್ಟರ್ ಮತ್ತಿತರ ಸಾಲಗಳನ್ನೂ ಮನ್ನಾ ಮಾಡಬೇಕು' ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ಕೇಂದ್ರ ಸರ್ಕಾರವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಕಳೆದ ಬಾರಿ ಗೋವಿನಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದ ಕೇಂದ್ರ ಸರ್ಕಾರವು ಅನುದಾನ ನೀಡಿಲ್ಲ. ಇದೇ ರೀತಿ ಈ ಬಾರಿಯೂ ರೈತರ ಮೂಗಿಗೆ ತುಪ್ಪ ಸವರಬಾರದು ಎಂದು ಎಚ್ಚರಿಕೆ ನೀಡಿದರು.

ಲಾವಣಿ: ಬಹುತೇಕ ಭೂ ಮಾಲೀಕರು ತಮ್ಮ ಹೊಲವನ್ನು ಬಡ ರೈತರಿಗೆ ಲಾವಣಿ ನೀಡಿದ್ದಾರೆ. ಆದರೆ, ಬೆಳೆ ಸಾಲ, ಬೆಳೆ ವಿಮೆ, ಇನ್‌ಫುಟ್ ಸಬ್ಸಿಡಿ ಮತ್ತಿತರ ಸೌಲಭ್ಯಗಳನ್ನು ಭೂ ಮಾಲೀಕರೇ ಪಡೆಯುತ್ತಿದ್ದಾರೆ. ಅಲ್ಲದೇ, ಲಾವಣಿ ಮಾಡುತ್ತಿರುವ ಬಡ ರೈತರಿಂದ ‘ಲಾವಣಿ’ ಹಣವನ್ನೂ ಪಡೆಯುತ್ತಾರೆ. ಈ ಭೂ ಮಾಲೀಕರು ರಾಜಕೀಯ, ಉದ್ಯಮದಲ್ಲಿ ಸುಭದ್ರವಾಗಿದ್ದಾರೆ. ಅವರೂ ಸಾಲ ಮನ್ನಾದ ಪ್ರಯೋಜನ ಪಡೆಯುತ್ತಾರೆ.

ಹೀಗಾಗಿ, ಎಲ್ಲ ವ್ಯವಹಾರಕ್ಕೂ ‘ಆಧಾರ್ ಲಿಂಕ್’ ಮಾಡಿ, ನೈಜ ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಮಾತ್ರ ಸಾಲ ಮನ್ನಾದ ಪ್ರಯೋಜನ ನೀಡಬೇಕು. ಬಳಿಕ ಸಂಕಷ್ಟದಲ್ಲಿ ಇರುವ ಲಾವಣಿದಾರರಿಗೆ ನೆರವು ನೀಡಬೇಕು ಎಂದು ರೈತ ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.

ಹಾವೇರಿ ಜಿಲ್ಲೆಯ ಕೃಷಿ ಹಾಗೂ ಪೂರಕ ಮಾಹಿತಿ

ಕೃಷಿ ಪತ್ತಿನ ಸಹಕಾರ ಸಂಘಗಳು –229

ಬ್ಯಾಂಕ್ ಶಾಖೆಗಳು– 218

ರೈತರ ಬ್ಯಾಂಕ್ ಖಾತೆಗಳು– 2.79 ಲಕ್ಷ

ಈ ವರ್ಷದ (2018–19) ಕೃಷಿ ಸಾಲದ ಗುರಿ– ₹ 4,481 ಕೋಟಿ

ಸಹಕಾರ ಸಂಘಗಳಲ್ಲಿ (₹ 50 ಸಾವಿರ ತನಕ) ಮನ್ನಾಗೊಂಡ ಸಾಲ– ₹106.45 ಕೋಟಿ

ಸಹಕಾರ ಸಂಘಗಳಲ್ಲಿ ₹ 50 ಸಾವಿರ ತನಕ ಸಾಲ ಮನ್ನಾದ ಲಾಭ ಪಡೆದವರು– 35,106

ಸಹಕಾರ ಸಂಘಗಳಲ್ಲಿ ಕೃಷಿ ಪೂರಕವಾದ ಇತರ ಸಾಲ ಪಡೆದವರು – 64

ಸಹಕಾರ ಸಂಘಗಳಲ್ಲಿ ಕೃಷಿ ಪೂರಕ ಇತರ ಸಾಲದ ಒಟ್ಟು ಪ್ರಮಾಣ –₹ 2.88 ಕೋಟಿ

ಜಿಲ್ಲೆಯಲ್ಲಿ ಒಟ್ಟು ₹ 3,046 ಕೋಟಿ ಕೃಷಿ ಸಾಲವಿದ್ದು, ಸಾಲಮನ್ನಾ ಘೋಷಣೆ ಪ್ರಕಾರ ಎಷ್ಟು ಸಾಲ ಮನ್ನಾಗೊಳ್ಳಬಹುದು ಎಂಬ ವರದಿ ತಯಾರಿಸಬೇಕಿದೆ
- ಕದರಪ್ಪ,ಮ್ಯಾನೇಜರ್, ಲೀಡ್‌ (ವಿಜಯಾ) ಬ್ಯಾಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.