ADVERTISEMENT

17ರಿಂದ ರಾಷ್ಟ್ರೀಯ ಭಾವೈಕ್ಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 7:35 IST
Last Updated 15 ಫೆಬ್ರುವರಿ 2012, 7:35 IST

ರಾಣೆಬೆನ್ನೂರು: ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಫೆ.17 ಮತ್ತು 18 ರಂದು ಕರ್ನಾಟಕ ವೀರಶೈವ ಪಂಚಮಸಾಲಿ ಸಂಘದ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ 2008 ಆಶ್ರಯದಲ್ಲಿ ನಡೆಯಲಿರುವ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ 4ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಭಾವೈಕ್ಯ ಸಮಾವೇಶಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಂಚಮಸಾಲಿ ಸಮಾಜದ ಮುಖಂಡ ಕರಬಸಪ್ಪ ಬಣಕಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ದಿನಗಳ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವರು. ಹರಿಹರದ ವೀರಶೈವ ಪಂಚಮಸಾಲಿ ಪೀಠದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಸ್ವಾಮಿ ಹಾಗೂ ಚರ ಪೀಠಾಧಿಪತಿ ಸಿದ್ಧಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರ ಅಧ್ಯಕ್ಷತೆ ವಹಿಸುವರು.

ಫೆ.17 ರಂದು ಬೆಳಿಗ್ಗೆ 9 ಗಂಟೆಗೆ ಕುಂಭಗಳು ಮತ್ತು ಸಾಂಸ್ಕೃತಿಕ ತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯುವುದು. ಮೆರವಣಿಗೆಯಲ್ಲಿ ನಾಡಿನ ಹರಗುರು ಚರಮೂರ್ತಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಫೆ.18 ರಂದು ಮಧ್ಯಾಹ್ನ 12 ಗಂಟೆಗೆ  ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ 4ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದರು.

ನೈಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಪಂಚವಾಣಿ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು, ಬೃಹತ್ ಮತ್ತು ಮಧ್ಯಮ ಕೈಗರಿಕೆ ಸಚಿವ ಮುರುಗೇಶ ಆರ್ ನಿರಾಣಿ ಅವರು ಪಂಚಮಸಾಲಿ ದಿನದರ್ಶಿಕೆ ಬಿಡುಗಡೆ ಮಾಡುವರು.

ಪೌರಡಳಿತ ಸಚಿವ ಬಾಲಚಂದ್ರಜಾರಕಿಹೊಳಿ ಅವರು ಎಂಪಿತ್ರಿ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ. ಕೃಷಿ ಸಚಿವ ಉಮೇಶ ಕತ್ತಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಬಣಕಾರ ತಿಳಿಸಿದರು.

ತಾಲ್ಲೂಕಿನ  ದೇವರಗುಡ್ಡ ಗುಡ್ಡದ ಸುನೀಲ ಬಿ.ಎ ಹಾಗೂ ಸಂಘಡಿಗರು ಸಂಗೀತ ಸೇವೆ ಸಲ್ಲಿಸುವರು.
ತಾಲ್ಲೂಕು ಅಧ್ಯಕ್ಷ ಬಳ್ಳಾರಿ, ಬಸವರಾಜ ಪಾಟೀಲ, ಬಸವರಾಜ ಗುರಿಕಾರ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಶಿವಪ್ಪ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.