ADVERTISEMENT

ಹಾವೇರಿ ಜಿಲ್ಲೆಯಲ್ಲಿ 360 ವಿದ್ಯಾರ್ಥಿಗಳು ನೋಂದಣಿ

ಆ.21ರಿಂದ ಸೆ.3ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:31 IST
Last Updated 19 ಆಗಸ್ಟ್ 2021, 15:31 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಹಾವೇರಿ: ದ್ವಿತೀಯ ಪಿ.ಯು.ಸಿ. ಬಾಹ್ಯ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿ.ಯು.ಸಿ. ಫಲಿತಾಂಶವನ್ನು ಒಪ್ಪದೇ ಮರು ಪರೀಕ್ಷೆ ಎದುರಿಸಲು ಸಿದ್ಧವಾದ ಪರೀಕ್ಷಾರ್ಥಿಗಳಿಗೆ ಇದೇ ಆ.21ರಿಂದ ಸೆ.3ರವರೆಗೆ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪರೀಕ್ಷಾ ಮೇಲ್ವಿಚಾರಕರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪರೀಕ್ಷೆ ಕುರಿತಂತೆ ಪೂರ್ವ ಸಿದ್ಧತೆ ಸಭೆ ನಡೆಸಿದ ಅವರು ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಇಚ್ಛಿಸಿದಲ್ಲಿ ಕಡ್ಡಾಯವಾಗಿ ಆಯಾ ತಾಲ್ಲೂಕು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಥರ್ಮಲ್ ಸ್ಕ್ಯಾನರ್‌ ಮೂಲಕ ಜ್ವರ ತಪಾಸಣೆ ನಡೆಸಬೇಕು. 98ಕ್ಕಿಂತ ಹೆಚ್ಚು ತಾಪಮಾನವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಪರೀಕ್ಷೆ ನಡೆಯುವ ಎಲ್ಲ ಕೊಠಡಿಗಳನ್ನು ಮುಂಚಿತವಾಗಿ ಸ್ಯಾನಿಟೈಸರ್ ಮಾಡಬೇಕು. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಒಂದಾದರೂ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು ಎಂದು ಸೂಚಿಸಿದರು.

ADVERTISEMENT

ಮೊಬೈಲ್‌ ನಿಷೇಧ:

ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಉಪಕರಣಗಳಾದ ಮೊಬೈಲ್, ಬ್ಯೂಟೂತ್, ಲಾಗ್ ಟೇಬಲ್, ಕ್ಯಾಲ್ಕುಲೇಟರ್‌ ಪರೀಕ್ಷಾ ಕೊಠಡಿಯೊಳಗೆ ತರದಂತೆ ನಿಷೇಧಿಸಬೇಕು.ಪೊಲೀಸ್ ಬಂದೋಬಸ್ತ್ , ವೈದ್ಯಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ನಡೆಸಬೇಕು. ಪರೀಕ್ಷೆಯ ವಿವಿಧ ಜವಾಬ್ದಾರಿಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಉಮೇಶಪ್ಪ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ಐದು ಪುನರಾವರ್ತಿತ ಹಾಗೂ 355 ಖಾಸಗಿ ವಿದ್ಯಾರ್ಥಿಗಳು ಸೇರಿ 360 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಜಿಲ್ಲೆ ಏಳು ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪರೀಕ್ಷಾ ಕೇಂದ್ರಗಳು:ಹಾವೇರಿ ನಗರದ ಎಸ್.ಜೆ.ಎಂ.ಪದವಿ ಪೂರ್ವ ಕಾಲೇಜು (ಹೊಸಮಠ), ರಾಣೆಬೆನ್ನೂರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬ್ಯಾಡಗಿ ಎಸ್.ಜೆ.ಜೆ.ಎಂ.ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾನಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಿರೇಕೆರೂರಿನ ಕೆ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜು, ಸವಣೂರಿನ ಮಜೀದ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿಗ್ಗಾವಿಯ ಎಸ್.ಬಿ.ಬಿ.ಎಂ.ಡಿ. ಪದವಿ ಪೂರ್ವ ಕಾಲೇಜನಲ್ಲಿ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷಾ ವೇಳಾಪಟ್ಟಿ

ಆಗಸ್ಟ್ 21ರಂದು ಕನ್ನಡ, ಆ.23ರಂದು ಭೌಗೋಳಿಕ ಮನೋವಿಜ್ಞಾನ, ಭೌತಶಾಸ್ತ, ಆ.24ರಂದು ಇಂಗ್ಲಿಷ್, ಆ.25ರಂದು ಅಕೌಂಟೆನ್ಸಿ, ಜಿಯಾಲಜಿ, ಶಿಕ್ಷಣ, ಗೃಹ ವಿಜ್ಞಾನ, ಆ.26ರಂದು ರಾಜಕೀಯ ವಿಜ್ಞಾನ, ಆ.27ರಂದು ಇತಿಹಾಸ, ಸ್ಟ್ಯಾಟ್ಸ್‌, ಆ.30ರಂದು ಅರ್ಥಶಾಸ್ತ್ರ, ಆ.31ರಂದು ಉರ್ದು, ಸಂಸ್ಕೃತ, ಸೆ.1ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸಮಾಜಶಾಸ್ತ್ರ, ಜೀವಶಾಸ್ತ್ರ, ಎಲೆ‌ಕ್ಟ್ರಾನಿಕ್ಸ್‌, ಕಂಪ್ಯೂಟರ್ ವಿಜ್ಞಾನ, ಸೆ.2ರಂದು ತರ್ಕ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ ಹಾಗೂ ಸೆ.3ರಂದು ಹಿಂದಿ ವಿಷಯಗಳ ಕುರಿತು ಪರೀಕ್ಷೆ ನಡೆಯುವುದಾಗಿ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.