ADVERTISEMENT

ಅಂಕಸಾಪುರದಲ್ಲಿ ಆಕಸ್ಮಿಕವಾಗಿ ನಾಲ್ಕು ಎತ್ತುಗಳ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 13:56 IST
Last Updated 30 ಮಾರ್ಚ್ 2020, 13:56 IST

ರಾಣೆಬೆನ್ನೂರು: ತಾಲ್ಲೂಕಿನ ಅಂಕಸಾಪುರ ಗ್ರಾಮದ ರೈತ ರಾಮಪ್ಪ ಗೋಣೆಪ್ಪ ಅಡಿವೇರ ಎಂಬುವವರಿಗೆ ಸೇರಿದ 4 ಎತ್ತುಗಳು ಆಕಸ್ಮಿಕವಾಗಿ ದನದ ಕೊಟ್ಟಿಗೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ರೈತ ರಾಮಪ್ಪ ಭಾನುವಾರ ರಾತ್ರಿ ಎಲ್ಲ ಎತ್ತುಗಳಿಗೆ ನೀರು ಕುಡಿಸಿ ಮೇವು ಹಾಕಿ ಮಲಗಿದ್ದರು. ಬೆಳಗಿನ ಜಾವ ಎತ್ತುಗಳಿಗೆ ಮೇವು ಹಾಕಲು ಎಂದಿನಂತೆ ದನದ ಕೊಟ್ಟಿಗೆಗೆ ಹೋದಾಗ ಆಗ ನಾಲ್ಕು ಎತ್ತುಗಳು ಮೃತಪಟ್ಟಿದ್ದು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಪಶುವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಶಾಸಕ ಅರುಣಕುಮಾರ ಪೂಜಾರ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಎತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ADVERTISEMENT

ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಗೌಡಪ್ಪಗೌಡ್ರ, ತಾಲ್ಲೂಕು ಪಂಚಾಯ್ತಿ ಇಒ ಎಸ್.ಎಂ. ಕಾಂಬಳೆ ಭೇಟಿ ನೀಡಿದರು.

ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೃಷಿ ಸಚಿವ ಬಿ.ಸಿ, ಪಾಟೀಲರ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಎತ್ತುಗಳ ಮಾಲೀಕರಿಗೆ ಕೃಷಿ ಸಚಿವರು ಈಗಿನ ಮಾರುಕಟ್ಟೆದರದಲ್ಲಿ ಕನಿಷ್ಠ ₹ 4 ಲಕ್ಷ ಪರಿಹಾರ ಕೊಡಿಸಬೇಕು ಎಂದು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.

ದಿಳ್ಳೆಪ್ಪ ಸತ್ಯಪ್ಪನವರ, ಮಲ್ಲಿಕಾರ್ಜುನ ನಡುವಿನಮನಿ, ನಾಗರಾಜು ಸೂರ್ವೆ ಮಂಜುನಾಥ, ಹರಿಹರಗೌಡ ಪಾಟೀಲ, ನಾಗಪ್ಪ ಬೆನ್ನೂರು, ಗಣೇಶ ಬಂಡಿವಡ್ಡರ, ಸುರೇಶಪ್ಪ ಗರಡೀಮನಿ, ಪ್ರಕಾಶ ಲಮಾಣಿ, ಲಕ್ಷ್ಮಣ ಲಮಾಣಿ, ಊದೇಶ ನಡುವಿನಮನಿ ಇದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.