ADVERTISEMENT

ಬೇಸಿಗೆಗೂ ಮುನ್ನವೇ ನೀರಿಗಾಗಿ ಪರದಾಟ

ಮಾರುತಿ ಪೇಟಕರ
Published 23 ಜನವರಿ 2018, 10:28 IST
Last Updated 23 ಜನವರಿ 2018, 10:28 IST
ಹಾನಗಲ್‌ ತಾಲ್ಲೂಕು ಮಾಸನಕಟ್ಟಿ ಗ್ರಾಮದಲ್ಲಿ ದೂಡು ಗಾಡಿ ಮೂಲಕ ಕುಡಿವ ನೀರು ತರುವ ಕಾಯದಲ್ಲಿ ತೊಡಗಿಕೊಂಡ ಗ್ರಾಮಸ್ಥರು
ಹಾನಗಲ್‌ ತಾಲ್ಲೂಕು ಮಾಸನಕಟ್ಟಿ ಗ್ರಾಮದಲ್ಲಿ ದೂಡು ಗಾಡಿ ಮೂಲಕ ಕುಡಿವ ನೀರು ತರುವ ಕಾಯದಲ್ಲಿ ತೊಡಗಿಕೊಂಡ ಗ್ರಾಮಸ್ಥರು   

ಹಾನಗಲ್: ಬೇಸಿಗೆ ಪ್ರಾರಂಭಕ್ಕೂ ಮುನ್ನ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಸದ್ಯ 4 ಗ್ರಾಮಗಳು ತೀವ್ರ ಸಮಸ್ಯೆಯಲ್ಲಿವೆ, 22 ಸಂಭವನೀಯ ಸಮಸ್ಯಾತ್ಮಕ ಗ್ರಾಮಗಳು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಂದಾಜಿಸಿದೆ.

ಮೂರು ವರ್ಷದಿಂದ ಬರದಿಂದಾಗಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಕೆರೆ–ಕಟ್ಟೆ, ನದಿಗಳು ಒಣಗಿದ್ದು, ಕೊಳವೆಬಾವಿಗಳು ಬರಿದಾಗಿವೆ, ಕೆಲವು ಗ್ರಾಮಗಳಲ್ಲಿ ಕಳೆದ ಬೇಸಿಗೆಯಲ್ಲಿ ಕೊರೆಸಿದ ಕೊಳವೆಬಾವಿಗಳು ವಿಫಲವಾಗಿವೆ. ತಾಲ್ಲೂಕಿನ ಮಾಸನಕಟ್ಟಿ, ಬಿಂಗಾಪುರ, ಜಾನಗುಂಡಿ, ಚನ್ನಾಪುರ ಗ್ರಾಮಗಳು ಈಗಾಗಲೇ ಕುಡಿವ ನೀರಿನ ತೊಂದರೆ ಅನುಭವಿಸುತ್ತಿವೆ, ಈ ಗ್ರಾಮಗಳಲ್ಲಿ ಕುಡಿವ ನೀರು ಪೂರೈಕೆಯ ಕೊಳವೆಬಾವಿಗಳು ಖಾಲಿಯಾಗಿವೆ.

ಕೂಡಲ, ನೆಲ್ಲೀಬಿಡ, ಗುಂಡೂರ, ಶಿವಪುರ, ಇನಾಂ ನೀರಲಗಿ, ಕಲುಗುಡ್ಡಿ, ಕಾಡಶೆಟ್ಟಿಹಳ್ಳಿ, ಹುಲಗಡ್ಡಿ, ಹಳ್ಳಿಬೈಲ್‌, ಮಾರನಬೀಡ, ಕೊಣನಕೊಪ್ಪ, ಕ್ಯಾಸನೂರ, ಮತ್ತಿಹಳ್ಳಿ, ಹುಲಗಿನಹಳ್ಳಿ, ಮಲಗುಂದ, ಯತ್ನಳ್ಳಿ, ಅಕ್ಕಿಆಲೂರ ಗ್ರಾಮಗಳು ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆಗೆ ಒಳಗಾಗಲಿವೆ ಎಂದು ಕಳೆದ ಬೇಸಿಗೆಯ ಸ್ಥಿತಿಗತಿಯ ಆಧಾರದ ಮೇಲೆ ಅಂದಾಜಿಸಲಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಹರಿಯುವ ಧರ್ಮಾ ಮತ್ತು ವರದೆಯ ಒಡಲು ಈಗ ಬರಿದಾಗಿದೆ. ಈ ನದಿಗಳಿಗೆ ಹೊಂದಿಕೊಂಡು ನಿರ್ಮಾಣಗೊಂಡ ಬಾಂದಾರ್‌ಗಳು ನೀರಿಲ್ಲದಂತಾಗಿ ತಿಂಗಳುಗಳೇ ಕಳೆದಿವೆ. ಧರ್ಮಾ ಜಲಾಶಯದಿಂದ ನೀರು ಬಿಟ್ಟ ನಂತರ ಧರ್ಮಾ ವ್ಯಾಪ್ತಿಯ ಬಾಂದಾರ್‌ಗಳಲ್ಲಿ ನೀರು ಸಂಗ್ರಹಣೆ ಆಗುತ್ತಿದೆ, ಇನ್ನು, ವರದಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದ್ದ 4 ಬಹುಗ್ರಾಮ ಕುಡಿವ ನೀರು ಯೋಜನೆಯಗಳ ಪೈಕಿ 3 ರಲ್ಲಿ ನೀರಿಲ್ಲದೆ ನಿಷ್ಟ್ರೀಯಗೊಂಡಿವೆ.

ಹಾನಗಲ್‌ ಪಟ್ಟಣ ಕುಡಿವ ನೀರಿನ ಸಮಸ್ಯೆಯಿಂದ ಹೊರತಾಗಿದೆ ಎಂಬುದು ಸಮಾಧಾನಕರ ಸಂಗತಿ. ಇಲ್ಲಿನ ಆನಿಕೆರೆ ತುಂಬಿಕೊಂಡಿದ್ದು, ಈ ಕೆರೆಗೆ ಧರ್ಮಾ ಜಲಾಶಯದಿಂದ ನಿರಂತರವಾಗಿ ನೀರು ಹರಿಸಲಾಗುತ್ತದೆ. ಹೀಗಾಗಿ ಪಟ್ಟಣದ ನಿವಾಸಿಗಳು ಬಚಾವ್.

ಮಾಸನಕಟ್ಟಿ: ಸುಮಾರು 4 ಸಾವಿರ ಜನಸಂಖ್ಯೆಯ ಮಾಸನಕಟ್ಟಿ ಗ್ರಾಮಕ್ಕೆ ಸದ್ಯ ಒಂದು ಕೊಳವೆಬಾವಿ ಇದ್ದು, ಅದರಲ್ಲಿ 1 ಗಂಟೆ ನೀರು ಬಂದು ಮತ್ತೊಂದು ಗಂಟೆಗೆ ಬಂದ್ ಆಗುತ್ತದೆ.

‘ಇಲ್ಲಿ ಪ್ರತಿಯೊಂದು ಮನೆಯಲ್ಲೂ 8 ಕೊಡಗಳನ್ನು ಹೊತ್ತು ತರುವ ದೂಡು ಗಾಡಿ ಇದೆ, ವಿದ್ಯುತ್‌ ವ್ಯತ್ಯಯ ಉಂಟಾದರೆ, ಬಾವಿಯ ನೀರು ಬರದಿದ್ದಾಗ ದಿನಗಟ್ಟಲೇ ಗ್ರಾಮಸ್ಥರು ಕಾಯಬೇಕಾಗುತ್ತದೆ. ಹೀಗಾಗಿ ಪ್ರತಿ ಮನೆಯಲ್ಲಿ ನಿತ್ಯವೂ ಒಬ್ಬರು ನೀರು ತರಲು ಸಾಹಸಪಡುವ ಸ್ಥಿತಿ ಉಂಟಾಗಿದೆ’ ಎಂದು ಇಲ್ಲಿನ ನಿವಾಸಿ ಶಿವಲಿಂಗಪ್ಪ ಅಂಗಡಿ ಹೇಳುತ್ತಾರೆ.

‘ಮನೆ ಮುಂದಿನ ನಲ್ಲಿಯಲ್ಲಿ ನೀರು ಬರದೆ 6 ತಿಂಗಳು ಗತಿಸಿದೆ. ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥಿತವಾಗಿದೆ. ಆದರೆ ನೀರಿನ ಸಮಸ್ಯೆ ಮಾತ್ರ ಸರಿಯಾಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಶಿವಪ್ಪ ಭಜಂತ್ರಿ ವಿವರಿಸುತ್ತಾರೆ.

‘ಕಳೆದ ಬೇಸಿಗೆಯಲ್ಲಿ ಏಳೆಂಟು ಕೊಳವೆಬಾವಿ ಕೊರೆಸಲಾಗಿದೆ. ಆದರೆ, ನೀರು ಬಂದಿಲ್ಲ. ಸಮೀಪದ ಶಿಗ್ಗಾವ ಹನಿ ನೀರಾವರಿ ಯೋಜನೆ ಬಳಸಿಕೊಂಡು ಕೆರೆ ತುಂಬಿಸಿ ಶಾಶ್ವತ ಕುಡಿವ ನೀರಿನ ಯೋಜನೆ ಮಾಸನಕಟ್ಟಿಗೆ ಸಾಕಾರಗೊಳ್ಳಬೇಕಿದೆ’  ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಸಿದ್ಧಪ್ಪ ಹೆರಗಪ್ಪನವರ ಹೇಳುತ್ತಾರೆ.

‘ಕಳೆದ ಬೇಸಿಗೆಯಲ್ಲಿ ಕುಡಿವ ನೀರು ಪೂರೈಕೆಗಾಗಿ 5 ಹಂತದಲ್ಲಿ ₹1.50 ಕೋಟಿ ಹಣ ಖರ್ಚು ಮಾಡಲಾಗಿದೆ. 350 ಕೊಳವೆಬಾವಿ ಕೊರೆಸಲಾಗಿತ್ತು. ಈ ಪೈಕಿ 175 ಬಾವಿ ವಿಫಲಗೊಂಡಿವೆ. ಉಳಿದವುಗಳ ಪೈಕಿ ಬಹುತೇಕ ಬಾವಿಗಳು ಕೆಲ ದಿನಗಳಲ್ಲಿ ಬಂದ್‌ ಆಗಿವೆ’ ಎಂದು ಜಿಲ್ಲಾ ಪಂಚಾಯ್ತಿ ಮತ್ತು ಗ್ರಾಮೀಣ ಕುಡಿವ ನೀರು, ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ ಆರ್‌.ಎಂ.ಸೊಪ್ಪಿಮಠ ಹೇಳಿದರು.

ಮೇಲ್ಮಟ್ಟದ ಜಲಾಗಾರ ನಿರ್ಮಾಣ ಭರವಸೆ

ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಿ, ಪೈಪ್‌ಲೈನ್‌ ಅಳವಡಿಸಿ ಮೇಲ್ಮಟ್ಟದ ಜಲಾಗಾರ ನಿರ್ಮಾಣದ ಮೂಲಕ ನಲ್ಲಿ ನೀರು ಸರಬರಾಜು ಮಾಡುವ ಕಾಮಗಾರಿಗಳನ್ನು ಬೇಸಿಗೆ ಮುನ್ನವೇ ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ಮೇಲ್ಮಟ್ಟದ ಜಲಾಗಾರವನ್ನು 17 ಗ್ರಾಮಗಳಲ್ಲಿ ತಲಾ ₹20 ಲಕ್ಷ ವೆಚ್ಚದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್‌ ತಿಳಿಸಿದ್ದಾರೆ.

* * 

ಜಾನಗುಂಡಿ ಗ್ರಾಮಕ್ಕೆ ಸಮೀಪದ ಬಾದಾಮಗಟ್ಟಿ ಭಾಗದಲ್ಲಿ ಕೊಳವೆಬಾವಿ ಕೊರೆಸಿ ಪೈಪ್‌ಲೈಲ್‌ ಮೂಲಕ ನೀರು ತರಬೇಕು. ಈ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗಿದೆ.
ಸೋಮನಾಥ ಚವ್ಹಾಣ
ತಾಲ್ಲೂಕು ಪಂಚಾಯ್ತಿ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.