ADVERTISEMENT

ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 11:22 IST
Last Updated 24 ಜನವರಿ 2018, 11:22 IST

ರಾಣೆಬೆನ್ನೂರು: 2016ನೇ ಸಾಲಿನ ಬೆಳೆವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ವಿಳಂಬ ಮಾಡಿದ್ದನ್ನು ಖಂಡಿಸಿ ರೈತರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಿಮಾ ಕಂಪೆನಿಯ ಅಧಿಕಾರಿಗಳನ್ನು ಕೂಡಿಹಾಕಿದ ಘಟನೆ ಮಂಗಳವಾರ ನಡೆಯಿತು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ಸಾವಿರಾರು ರೈತರು ಅಧಿಕಾರಿಗಳ ನಿರ್ಲಕ್ಷ್ಯಯಿಂದ ಬೆಳೆವಿಮೆ ಹಣಕ್ಕಾಗಿ ನಿತ್ಯ ಬ್ಯಾಂಕ್‌ಗಳಿಗೆ ಅಲೆದಾಡುವಂತಾಗಿದೆ. ವಿಮಾ ಕಂಪೆನಿಯವರು ಈ ಕುರಿತು ರೈತರಿಗೆ ಸರಿಯಾದ ಮಾಹಿತಿಯನ್ನು ನೀಡದೆ ವಂಚನೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಬೆಳೆವಿಮೆ ತುಂಬಿದ ರೈತರ ದಾಖ ಲಾತಿಗಳನ್ನು ಪರಿಶೀಲನೆ ಮಾಡಲು ಕೃಷಿ ಇಲಾಖೆಗೆ ಭೇಟಿ ನೀಡಿದ್ದ ವಿಮಾ ಕಂಪೆನಿಯ ಅಧಿಕಾರಿಗಳನ್ನು ಕೂಡಿ ಹಾಕಲಾಗಿದೆ. ತಾಂತ್ರಿಕ ಕಾರಣಗಳಿಂದ ಇದುವರೆಗೂ ರೈತರಿಗೆ ಬೆಳೆವಿಮೆ ಹಣ ಬಂದಿಲ್ಲ. ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ವಿಮಾ ಸೌಲಭ್ಯವನ್ನು ಕಲ್ಪಿಸಬೇಕು. ಇಲ್ಲವೇ ಅಧಿಕಾರಿಗಳನ್ನು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

ಬಳಿಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಫ್.ಎ.ಬಾಗವಾನ್ ಮಾತನಾಡಿ, ಒಂದು ವಾರ ತಾವು ಇಲ್ಲಿಯೇ ಇದ್ದು ರೈತರಿಗೆ ಸರಿಯಾದ ಮಾಹಿತಿ ನೀಡ ಬೇಕು. ನಿಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ತಾಂತ್ರಿಕ ತೊಂದರೆಯನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಮಾ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದರು. ಆ ಬಳಿಕ ರೈತರು ಅವರನ್ನು ಬಿಡುಗಡೆಗೊಳಿಸಿ ಪ್ರತಿಭಟನೆಯನ್ನು ಹಿಂಪಡೆದರು.

ರೈತ ಮುಖಂಡರಾದ ಚಂದ್ರಗೌಡ ಕರೇಗೌಡ್ರ, ಹನುಮಂತಪ್ಪ ಕಬ್ಬಾರ, ಮಲ್ಲಿಕಾಜುನ ಅಣ್ಣಪ್ಪಳವರ, ಸುರೇಶ ಎಸ್. ಅಕ್ಬರ್‌ಸಾಬ್ ಶೇತಸನದಿ, ಪರ್ವತಗೌಡ ಕುಸಗೂರ, ಉಮೇಶ ನಾರಜ್ಜಿ, ಜಟ್ಟೆಪ್ಪ ಕನ್ನಪ್ಪಳವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.