ADVERTISEMENT

ರಸ್ತೆ ಒತ್ತುವರಿ: ಸ್ವಯಂ ಪ್ರೇರಣೆಯ ತೆರವು

ಹರ್ಷವರ್ಧನ ಪಿ.ಆರ್.
Published 29 ಜನವರಿ 2018, 10:13 IST
Last Updated 29 ಜನವರಿ 2018, 10:13 IST
ಹಾವೇರಿಯ ಇಜಾರಿಲಕಮಾಪುರದಲ್ಲಿ ಸ್ಥಳೀಯರೇ ಸ್ವಯಂ ಪ್ರೇರಣೆಯಿಂದ ರಸ್ತೆ ಒತ್ತುವರಿ ತೆರವುಗೊಳಿಸುತ್ತಿರುವುದು
ಹಾವೇರಿಯ ಇಜಾರಿಲಕಮಾಪುರದಲ್ಲಿ ಸ್ಥಳೀಯರೇ ಸ್ವಯಂ ಪ್ರೇರಣೆಯಿಂದ ರಸ್ತೆ ಒತ್ತುವರಿ ತೆರವುಗೊಳಿಸುತ್ತಿರುವುದು   

ಹಾವೇರಿ: ಜಮೀನು, ರಸ್ತೆ, ಕೆರೆ, ಉದ್ಯಾನ ಸೇರಿದಂತೆ ಗೇಣು ಭೂಮಿ ಸಿಕ್ಕರೂ ಅತಿಕ್ರಮಿಸುವ ಪ್ರಕರಣಗಳೇ ಹಲವು. ಸರ್ಕಾರಿ, ಅರಣ್ಯ, ಸಾರ್ವಜನಿಕ ಭೂಮಿಯ ಮೇಲೆ ಒಡೆತನ ಒಡೆತನ ಸಾಧಿಸುವವರೂ ಅತ್ಯಧಿಕ. ಸಹಸ್ರ ಸಹಸ್ರ ಸಾರ್ವಜನಿಕರಿಗೆ ತೊಂದರೆಯಾದರೂ, ಆವರಣಗೋಡೆಯನ್ನೂ ತೆರವು ಮಾಡದೇ ಅನಾನುಕೂಲ ಕಲ್ಪಿಸುವವರು ಹಲವರು. ಪ್ರತಿನಿತ್ಯ ಭೂ ಕಬಳಿಕೆ, ತುಂಡು ಭೂಮಿಗೆ ಹೊಡೆದಾಟ, ಅತಿಕ್ರಮಣ ಸುದ್ದಿ ಕೇಳಿ ಬೇಸತ್ತವರಿಗೆ ‘ಮಾದರಿ ರಸ್ತೆ’ಯ ಸಿಹಿ ಸುದ್ದಿ ಇಲ್ಲಿದೆ.

ನಗರಸಭೆಯ 2ನೇ ವಾರ್ಡ್‌ನ ಹಳೇ ಇಜಾರಿ ಲಕಮಾಪುರದ ದುಂಡಿ ಬಸವೇಶ್ವರ ಗುಡಿಯಿಂದ ದುರ್ಗಾದೇವಿ ಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣಕ್ಕೆ ಜನರೇ ಮುಂದಾಗಿದ್ದಾರೆ. ಸ್ವತಃ ಆವರಣಗೋಡೆ, ಗೋಡೆ, ಚಾವಣಿ, ಮನೆ ಚಾವಡಿ, ಅಂಗಡಿ, ಮುಂಗಟ್ಟುಗಳನ್ನು ತೆರವು ಮಾಡಿ ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿದ್ದಾರೆ.

ಹಲವಾರು ವರ್ಷಗಳ ಒತ್ತುವರಿಯ ಪರಿಣಾಮ, 30 ವರ್ಷಗಳಲ್ಲಿ ಈ ರಸ್ತೆಯು 3 ಮೀಟರ್‌ಗೂ ಅಗಲ ಕಿರಿದಾಗಿತ್ತು. ಈಗ 7 ಮೀಟರ್ ಅಗಲ ಮಾಡಲಾಗುತ್ತಿದೆ.

ADVERTISEMENT

ನಗರಕ್ಕೆ ಮಂಜೂರಾಗಿದ್ದ ‘ಮುಖ್ಯಮಂತ್ರಿಗಳ ವಿಶೇಷ ಅನುದಾನ ₹ 50 ಕೋಟಿ’ಯನ್ನು ವಿವಿಧ ವಾರ್ಡ್‌ಗಳು ಹಾಗೂ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಕಾಮಗಾರಿಗಳು ಆರಂಭಗೊಂಡಿಲ್ಲ, ಕಳಪೆ ಕಾಮಗಾರಿ, ವಿಳಂಬ ಮತ್ತಿತರ ದೂರುಗಳೇ ಕೇಳಿಬಂದವು. ದೂರು ನೀಡುವವರು ಹೆಚ್ಚಾದರೇ ವಿನಹ, ಗುಣಮಟ್ಟ ಹಾಗೂ ಅಗಲೀಕರಣಕ್ಕೆ ಬೆಂಬಲಿಸುವ ಪ್ರಕರಣಗಳು ಕಂಡುಬರಲಿಲ್ಲ. ಹಲವೆಡೆ ಸ್ವತಃ  ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕಾದ ಸ್ಥಿತಿ ಬಂದಿತ್ತು.

ಆದರೆ, 2ನೇ ವಾರ್ಡ್‌ನ ಜನತೆ ಮಾದರಿಯಾದರು. ತಮ್ಮ ರಸ್ತೆಗೆ ಈ ಯೋಜನೆ ಅಡಿ ಮಂಜೂರಾದ ₹1.5 ಕೋಟಿ ಹಾಗೂ ನಗರೋತ್ಥಾನದ ₹1.6 ಕೋಟಿ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ನಿರ್ಧರಿಸಿದರು. ರಸ್ತೆ ಕಾಮಗಾರಿಗೂ ಮೊದಲು ಒತ್ತುವರಿ ತೆರವಿಗೆ ಮುಂದಾದರು.

‘ಟ್ರ್ಯಾಕ್ಟರ್, ಲಾರಿ ಮತ್ತಿತರ ಭಾರಿ ವಾಹನಗಳು ಚಲಿಸುವುದೇ ಅಸಾಧ್ಯವಾಗಿತ್ತು. ಎದುರಿನಿಂದ ಕಾರು ಬಂದರೆ, ಇನ್ನೊಂದು ಕಾರು ಹಿಂದಕ್ಕೆ ವಾಪಾಸ್ ಹೋಗಬೇಕಿತ್ತು. ಇದು, ಜನರ ನಡುವೆಯೇ ಆಗಾಗ್ಗೆ ಸಂಘರ್ಷಕ್ಕೂ ಕಾರಣವಾಗಿತ್ತು. ಹೀಗಾಗಿ ‘ಸ್ವಯಂ ಪ್ರೇರಿತ ತೆರವು’ ಕುರಿತು ಹಿರಿಯರಲ್ಲಿ ಮನವಿ ಮಾಡಿದೆನು. ಬಳಿಕ ನಡೆಯುತ್ತಿರುವುದೇ ಸಣ್ಣದಾದರೂ, ಐತಿಹಾಸಿಕ ಕೆಲಸ’ ಎಂದು ವಾರ್ಡ್ ಸದಸ್ಯ ಗುಡ್ಡನಗೌಡ್ರ ಅಂದಾನಿಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಬಾರಿ ರಸ್ತೆ ಕಾಮಗಾರಿ ನಡೆದರೆ, ಮತ್ತೆ ಅಗಲೀಕರಣ ಕಷ್ಟ. ಮರು ಕಾಮಗಾರಿಗೆ ಹಣವೂ ವ್ಯರ್ಥ. ಹೀಗಾಗಿ ಕಾಮಗಾರಿಗೂ ಮೊದಲೇ ಅಗಲೀಕರಣ ಮಾಡಬೇಕು ಎಂದು ವಿನಂತಿಸಿದೆ’ ಎಂದರು.

ಆ ಬಳಿಕ, ಇಲ್ಲಿನ ಗುಡಿ ಕಟ್ಟೆಯಲ್ಲಿ ಹಿರಿಯರು ಸೇರಿ ಸಭೆ ನಡೆಸಿದರು. ಪರಸ್ಪರ ಮನವೊಲಿಸುವ ಮೂಲಕ ಅತಿಯಾದ ಒತ್ತುವರಿಯನ್ನು ಸ್ವಯಂ ಪ್ರೇರಣೆ ತೆರವುಗೊಳಿಸುವ ನಿರ್ಧಾರ ಕೈಗೊಂಡರು. ತೆರವು ಕಾರ್ಯದಲ್ಲಿ ಬಡವರಿಗೆ ನಗರಸಭೆ ಹಾಗೂ ಗುತ್ತಿಗೆದಾರರು ನೆರವು ಕಲ್ಪಿಸಿದರು. ಹೀಗಾಗಿ 30 ವರ್ಷಗಳಿಂದ ಸಂಚರಿಸಲು ಅಸಾಧ್ಯವಾಗಿದ್ದ ರಸ್ತೆಯು, ಈಗ 7 ಮೀಟರ್ ಅಗಲವಾಗುತ್ತಿದೆ. ಕೆಲವು ದಿನಗಳಿಂದ ತೆರವು, ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

‘ನಾಗರಿಕರು ಒಗ್ಗಟ್ಟಾಗಿ ಕೈ ಜೋಡಿಸಿದರೆ ಮಾತ್ರ ಸರ್ಕಾರವು ಅಭಿವೃದ್ಧಿ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ. ನಮ್ಮ ಸುತ್ತಲ ಸ್ಥಿತಿಗತಿಗೆ ಸರ್ಕಾರದಷ್ಟೇ ನಮ್ಮ ಇಚ್ಛಾಶಕ್ತಿಯೂ ಕಾರಣ’ ಎಂದು ಸ್ವಯಂ ಪ್ರೇರಣೆಯಿಂದ ತೆರವಿಗೆ ಸಹಕರಿಸಿದ ಜಯಮ್ಮ ಪಾಟೀಲ್, ಕಾಶೆಪ್ಪಗೌಡ್ರ ಅಂದಾನಿಗೌಡ್ರ, ಶಂಕರಗೌಡ್ರ ನೀಲನಗೌಡ್ರ, ಪುಟ್ಟಪ್ಪ ತಳವಾರ, ಚನ್ನಬಸಪ್ಪ ಮಾಳಣ್ಣನವರ ಸೇರಿದಂತೆ ಹಲವರು ಒಕ್ಕೊರಲಿನಿಂದ ನುಡಿದರು.

* * 

ಇಜಾರಿಲಕಮಾಪುರದ ದುಂಡಿಬಸವೇಶ್ವರ ಗುಡಿಯಿಂದ ದುರ್ಗಾದೇವಿ ಗುಡಿ ತನಕದ ರಸ್ತೆ ಬದಿಯ ನಿವಾಸಿಗಳ ಸಹಕಾರ ಮಾದರಿಯಾಗಿದೆ
–ಗುಡ್ಡನಗೌಡ್ರ ಅಂದಾನಿಗೌಡ್ರ
ನರಸಭೆ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.