ADVERTISEMENT

‘ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಪಣ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:33 IST
Last Updated 19 ಫೆಬ್ರುವರಿ 2018, 9:33 IST

ಹಾನಗಲ್: ‘ಮಾತಿನ ಮಂಟಪ ಕಟ್ಟಿ ಮೋಸ ಮಾಡುವ ಕಾಲ ಇದಲ್ಲ ಎಂಬುದನ್ನು ರಾಜಕಾರಣಿಗಳು ಅರಿಯಬೇಕಾಗಿದೆ. ಮತದಾರರ ಆಶೋತ್ತರಗಳನ್ನು ಈಡೇರಿಸುವ ಕ್ರಿಯಾಶೀಲತೆಯಿದ್ದರೆ ಮಾತ್ರ ರಾಜಕಾರಣದಲ್ಲಿ ಸೈ ಎನಿಸಿಕೊಳ್ಳಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು. ಇಲ್ಲಿನ ಗಂಗಾನಗರದ ಪಳ್ಳಂಗಟ್ಟಿ ದೇವಸ್ಥಾನ ಆವರಣದಲ್ಲಿ ಶನಿವಾರ ಸಂಜೆ ಪಕ್ಷಕ್ಕೆ ಸೇರಿದವರನ್ನು ಸ್ವಾಗತಿಸಿ ಅವರು ಮಾತನಾಡಿದರು.

‘ಬಡವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದ, ಭ್ರಷ್ಟತೆಯನ್ನು ಪೋಷಿಸುವ, ಮಧ್ಯವರ್ತಿಗಳನ್ನು ಇಟ್ಟುಕೊಂಡು ಮೋಸ ಮಾಡುವ ರಾಜಕೀಯ ವ್ಯವಸ್ಥೆಗೆ ತಿಲಾಂಜಲಿ ಹಾಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಬೆಂಬಲ ನೀಡಬೇಕಾಗಿದೆ’ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸಿ ಜನಪರ ಆಡಳಿತ ನೀಡುತ್ತಿದೆ. 2022ಕ್ಕೆ ಎಲ್ಲ ಬಡವರೂ ವಸತಿ ಸಹಿತರಾಗುವಂತೆ ಯೋಜನೆ ರೂಪಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಭಾಗ್ಯಗಳ ಹೆಸರಿನಲ್ಲಿ ಜನರನ್ನು ಒಡೆಯುತ್ತಿದೆ. ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ’ ಎಂದು ಆರೋಪಿದರು.

ADVERTISEMENT

ಬಿಜೆಪಿ ಸೇರ್ಪಡೆಗೊಂಡ ರಾಮಚಂದ್ರ ಚಿಕ್ಕಣ್ಣನವರ ಮಾತನಾಡಿ, ‘ಅಧಿಕಾರದ ಆಸೆಗಾಗಿ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಸಮಾಜ ಸೇವೆಯೇ ನನ್ನ ಗುರಿ. ಮೋದಿ ಆಡಳಿತದ ಆಕರ್ಷಣೆಯೇ ಬಿಜೆಪಿ ಸೇರ್ಪಡೆಗೆ ಕಾರಣವಾಗಿದೆ’ ಎಂದರು. ರಾಮಚಂದ್ರ ಅವರ ಬೆಂಬಲಿಗರೂ ಬಿಜೆಪಿ ಸೇರಿದರು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಮುಖಂಡರಾದ ಬಿ.ಎಸ್.ಅಕ್ಕಿವಳ್ಳಿ, ಪದ್ಮನಾಭ ಕುಂದಾಪೂರ ಮಾತನಾಡಿದರು.

ಗಂಗಾಮತ ಸಮಾಜದ ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ, ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಎ.ಎಸ್.ಬಳ್ಳಾರಿ, ಮಾಲತೇಶ ಚಿಕ್ಕಣ್ಣನವರ, ಬಲ್ಲಣ್ಣ ಬಂಕಾಪುರ, ಮಾಲತೇಶ ಪೂಜಾರ, ರಾಜು ಗೌಳಿ, ರವಿರಾಜ ಕಲಾಲ, ಭಾಸ್ಕರ ಹುಲಮನಿ, ಲಕ್ಷ್ಮಣ ಬಾಳಂಬೀಡ, ಪ್ರದೀಪ ಶೇಷಗಿರಿ, ಅಜ್ಜಪ್ಪ ಶಿರಳ್ಳಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.