ADVERTISEMENT

ಎಸಿಬಿಯ 66 ಕೇಸ್‌ ಲೋಕಾಯುಕ್ತ ಅಂಗಳಕ್ಕೆ

625 ದೂರು ಅರ್ಜಿಗಳ ವರ್ಗಾವಣೆಗೆ ಸಿದ್ಧತೆ: ಅತಂತ್ರ ಸ್ಥಿತಿಯಲ್ಲಿ ಎಸಿಬಿ ಸಿಬ್ಬಂದಿ

ಸಿದ್ದು ಆರ್.ಜಿ.ಹಳ್ಳಿ
Published 9 ಅಕ್ಟೋಬರ್ 2022, 5:52 IST
Last Updated 9 ಅಕ್ಟೋಬರ್ 2022, 5:52 IST
ಎಸಿಬಿ ಲಾಂಛನ
ಎಸಿಬಿ ಲಾಂಛನ   

ಹಾವೇರಿ: ನಗರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸ್‌ ಠಾಣೆಯಲ್ಲಿ 7 ವರ್ಷಗಳಲ್ಲಿ ದಾಖಲಾಗಿದ್ದ 66 ಪ್ರಕರಣಗಳನ್ನು ಹಾವೇರಿಯ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾಯಿಸಲು ಸಿದ್ಧತೆ ನಡೆದಿದೆ.

36 ಟ್ರ್ಯಾಪ್‌, 4 ಡಿಎ (ಅಕ್ರಮ ಆಸ್ತಿ),2 ಸರ್ಚ್‌, 12 ಪಿಸಿಆರ್‌ ಸೇರಿದಂತೆ ಒಟ್ಟು 66 ಪ್ರಕರಣಗಳು ಎಸಿಬಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದವು. 30 ಪ್ರಕರಣಗಳು ತನಿಖಾ ಹಂತದಲ್ಲಿದ್ದು, 33 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. 3 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಹಾಕಲಾಗಿದೆ.

2016ರಲ್ಲಿ ಹಾವೇರಿಯಲ್ಲಿ ಆರಂಭಗೊಂಡ ಎಸಿಬಿ ಪೊಲೀಸ್‌ ಠಾಣೆಗೆ ಇದುವರೆಗೆ ಒಟ್ಟು 625 ದೂರು ಅರ್ಜಿಗಳು ಬಂದಿದ್ದವು. ಈ ಪೈಕಿ 498 ಅರ್ಜಿಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಮುಕ್ತಾಯಗೊಳಿಸಲಾಗಿದ್ದು, 126 ಅರ್ಜಿಗಳು ತನಿಖಾ ಹಂತದಲ್ಲಿದ್ದವು. ಈ ಎಲ್ಲ ದೂರು ಅರ್ಜಿಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾಯಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ADVERTISEMENT

2016ರಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್‌ ವಿಭಾಗದಿಂದ ಹಿಂಪಡೆದು ಎಸಿಬಿ ರಚಿಸಿತ್ತು. ಇದನ್ನು ರದ್ದುಗೊಳಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಆಗಸ್ಟ್‌ 11ರಂದು ತೀರ್ಪು ನೀಡಿತ್ತು.

ಹೈಕೋರ್ಟ್‌ ಆದೇಶದಂತೆ ಎಸಿಬಿ ರದ್ದುಗೊಳಿಸಿರುವ ರಾಜ್ಯ ಸರ್ಕಾರ, ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹಿಂದೆ ನೀಡಿದ್ದ ಅಧಿಕಾರಗಳನ್ನು ಮರುಸ್ಥಾಪಿಸಿ ಆದೇಶ ಹೊರಡಿಸಿದೆ.

ಅತಂತ್ರ ಸ್ಥಿತಿಯಲ್ಲಿ ಸಿಬ್ಬಂದಿ
ಎಸಿಬಿ ರದ್ದಾಗಿರುವ ಕಾರಣ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸದಾ ತನಿಖೆ, ವಿಚಾರಣೆ, ದಾಳಿ ಎಂದು ಕರ್ತವ್ಯದಲ್ಲಿ ತಲ್ಲೀನರಾಗಿರುತ್ತಿದ್ದ ಸಿಬ್ಬಂದಿಗೆ ಈಗ ಯಾವುದೇ ಅಧಿಕಾರವಿಲ್ಲದಂತಾಗಿದೆ. ಸರ್ಕಾರ ಈ ಸಿಬ್ಬಂದಿಯನ್ನು ಲೋಕಾಯುಕ್ತಕ್ಕೂ ವರ್ಗಾಯಿಸದೆ, ಬೇರೆ ಕಡೆಯೂ ನಿಯೋಜಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಭವಿಷ್ಯದ ಬಗ್ಗೆ ಇಲ್ಲಿನ ಸಿಬ್ಬಂದಿ ಚಿಂತಿಸುವಂತಾಗಿದೆ.

ಹಾವೇರಿ ಎಸಿಬಿ ಪೊಲೀಸ್‌ ಠಾಣೆಯಲ್ಲಿಡಿವೈಎಸ್ಪಿ–1, ಇನ್‌ಸ್ಪೆಕ್ಟರ್‌–2, ಸಿಬ್ಬಂದಿ–3, ಎಸ್‌ಡಿಎ–1 ಹಾಗೂ ಇಬ್ಬರು ಚಾಲಕರು ಇದ್ದು, ಇವರಿಗೆ ಇನ್ನೂ ವರ್ಗಾವಣೆ ಆದೇಶ ಬಂದಿಲ್ಲ. ಠಾಣೆಯಲ್ಲಿರುವ 2 ಜೀಪ್‌ ಮತ್ತು 1 ಕಾರು, ಕಂಪ್ಯೂಟರ್‌ಗಳು, ಪಿಠೋಪಕರಣಗಳನ್ನು ಯಾವ ಕಚೇರಿಗೆ ನೀಡಬೇಕು ಎಂಬ ಬಗ್ಗೆ ಇನ್ನೂ ಸರ್ಕಾರದಿಂದ ಆದೇಶ ಬಂದಿಲ್ಲ.

ಜಿಲ್ಲೆಯಲ್ಲಿ ಸದ್ದು ಮಾಡಿದ್ದ ಎಸಿಬಿ
ಭ್ರಷ್ಟಾಚಾರ, ಲಂಚಗುಳಿತನ, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ2016ರಿಂದ 2022ರವರೆಗೆ ವಿವಿಧ ದಾಳಿಗಳನ್ನು ನಡೆಸಿ, ಸರ್ಕಾರಿ ಅಧಿಕಾರಿಗಳನ್ನು ಬಲೆಗೆ ಬೀಳಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಗಳು ಸದ್ದು ಮಾಡಿದ್ದರು. ಭ್ರಷ್ಟಾಚಾರದಲ್ಲಿ ತೊಡಗುವ ಸರ್ಕಾರಿ ನೌಕರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಹಾವೇರಿ ನಗರಸಭೆ ಕಚೇರಿಯಲ್ಲಿ ₹15 ಸಾವಿರ ಲಂಚ ಪಡೆಯುವಾಗ ಪೌರಾಯುಕ್ತ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದರು.ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಎಂಜಿನಿಯರ್‌ನ ಎರಡು ಮನೆಗಳ ಮೇಲೆ ಹಾಗೂ ಹಾವೇರಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ಎಂಜಿನಿಯರ್‌ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿತ್ತು.

ಸವಣೂರು ತಾಲ್ಲೂಕಿನ ಮಂತ್ರೋಡಿ ಗ್ರಾ.ಪಂ.ನ ಪಿಡಿಒ, ಹಾವೇರಿ ತಾಲ್ಲೂಕಿನ ಆಲದಕಟ್ಟಿ ಪಿಡಿಒ,ಹಾನಗಲ್‌ ತಾಲ್ಲೂಕಿನ ಅರೆಲಕ್ಮಾಪುರದ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕ,ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಆಡಳಿತಾಧಿಕಾರಿ ಮತ್ತು ಕಚೇರಿ ಅಧೀಕ್ಷಕ ಸೇರಿದಂತೆ ಹಲವು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

***

ಸರ್ಕಾರದ ಆದೇಶದಂತೆ 4 ಸಿಬ್ಬಂದಿಯನ್ನು ಹಾವೇರಿ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನೂ 9 ಸಿಬ್ಬಂದಿ ಎಸಿಬಿ ಠಾಣೆಯಲ್ಲಿ ಇದ್ದಾರೆ.
- ಗೋಪಿ ಬಿ.ಆರ್‌, ಡಿವೈಎಸ್ಪಿ, ಹಾವೇರಿ ಎಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.