ADVERTISEMENT

ಬಕ್ರೀದ್ ವೇಳೆ 7 ಸಾವಿರ ದನಗಳ ರಕ್ಷಣೆ: ಸಚಿವ ಪ್ರಭು ಚೌಹಾಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 12:06 IST
Last Updated 29 ಆಗಸ್ಟ್ 2021, 12:06 IST
ಪ್ರಭು ಚೌಹಾಣ, ಪಶುಸಂಗೋಪನಾ ಸಚಿವ 
ಪ್ರಭು ಚೌಹಾಣ, ಪಶುಸಂಗೋಪನಾ ಸಚಿವ    

ಹಾವೇರಿ: ‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದ್ದು, ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಬಕ್ರೀದ್‌ ಸಮಯದಲ್ಲಿ ಸುಮಾರು 7 ಸಾವಿರ ದನಗಳ ರಕ್ಷಣೆ ಮಾಡಲಾಗಿದೆ’ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗೋ ಹತ್ಯೆ ನಿಷೇಧದ ಬಗ್ಗೆ ಗ್ರಾಮಸಭೆ ನಡೆಸಿ ಜನರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗೋಮಾತೆ ಕಸಾಯಿಖಾನೆಗೆ ಹೋಗಬಾರದು.ಅಕ್ರಮ ಕಸಾಯಿಖಾನೆಗಳು ಬಂದ್‌ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.

ಕಾಯಂ ಪಶು ಲೋಕ: ಬೆಂಗಳೂರಿನಲ್ಲಿ100 ಎಕರೆ ಜಾಗದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಪಶು ಲೋಕ (ಕಾಯಂ ಸ್ವರೂಪಿ ಪಶು ಮೇಳ) ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಎಲ್ಲ ತರಹದ ತಳಿಗಳ ಪ್ರದರ್ಶನ, ಅಧ್ಯಯನ ಹಾಗೂ ಇಲಾಖೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಭೇಟಿ ನೀಡುವ ಪ್ರವಾಸಿಗರಿಗೆ ಶುಲ್ಕ ವಿಧಿಸಿದರೆ, ಇಲಾಖೆಗೆ ಆದಾಯವೂ ಬರುತ್ತದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಗೋಶಾಲೆ ನಿರ್ಮಾಣ: ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ. ವಯಸ್ಸಾದ ಮತ್ತು ರೋಗಪೀಡಿತ ದನಗಳನ್ನು ರೈತರು ಗೋಶಾಲೆಗೆ ಕಳುಹಿಸಿದರೆ ನಾವು ಪಾಲನೆ ಮಾಡುತ್ತೇವೆ. ರಾಜ್ಯದ 22 ಜಿಲ್ಲೆಗಳಲ್ಲಿ ಜಾಗ ಗುರುತಿಸಲಾಗಿದೆ. ಅಕ್ಟೋಬರ್‌ ವೇಳೆಗೆ ಕನಿಷ್ಠ 5 ಗೋಶಾಲೆಗಳು ತೆರೆಯಲಿವೆ. ‘ಸಿಎಂ ತವರು ಜಿಲ್ಲೆ’ ಹಾವೇರಿಯಲ್ಲಿ ಮೊದಲ ಗೋಶಾಲೆ ಆರಂಭವಾಗಲಿದೆ ಎಂದರು.

8 ಸಾವಿರ ಹುದ್ದೆ ಭರ್ತಿಗೆ ಕ್ರಮ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ರಾಜ್ಯದಲ್ಲಿ ಮಂಜೂರಾದ 18,563 ಹುದ್ದೆಗಳಲ್ಲಿ ಕೇವಲ 9632 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಖಾಲಿ ಇರುವ 8931 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ ಒಂದು ತಿಂಗಳಲ್ಲಿ 10 ಸಾವಿರ ಕರೆಗಳು ಬಂದಿದ್ದವು. ಈ ಪೈಕಿ ಶೇ 85ರಷ್ಟು ಕರೆಗಳಿಗೆ ಪರಿಹಾರ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.