ADVERTISEMENT

ಕುಮಾರಪಟ್ಟಣ: 80 ಮೆಟ್ರಿಕ್‌ ಟನ್‌ ಅಕ್ರಮ ಮರಳು ವಶಕ್ಕೆ 

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 15:40 IST
Last Updated 9 ಜೂನ್ 2022, 15:40 IST
ಕುಮಾರಪಟ್ಟಣ ಸಮೀಪದ ನಲವಾಗಲ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಹಾವೇರಿ ಜಿಲ್ಲಾ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ವಶಕ್ಕೆ ಪಡೆದರು
ಕುಮಾರಪಟ್ಟಣ ಸಮೀಪದ ನಲವಾಗಲ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಹಾವೇರಿ ಜಿಲ್ಲಾ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ವಶಕ್ಕೆ ಪಡೆದರು   

ಕುಮಾರಪಟ್ಟಣ: ಇಲ್ಲಿನ ನಲವಾಗಲ ಗ್ರಾಮದ ಬಳಿ ತುಂಗಭದ್ರಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 80 ಮೆಟ್ರಿಕ್‌ ಟನ್‌ ಮರಳು ವಶಕ್ಕೆ ಪಡೆಯಲಾಗಿದೆ ಎಂದು ಹಾವೇರಿ ಜಿಲ್ಲಾ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ತಿಳಿಸಿದರು.

ಗುರುವಾರ ನಲವಾಗಲ ಗ್ರಾಮದ ಬಳಿ ತುಂಗಭದ್ರಾ ನದಿ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿ ರಾಶಿ ಹಾಕಿದ್ದ ಸ್ಥಳಕ್ಕೆ ತಹಶೀಲ್ದಾರ್‌ ಮತ್ತು ಪಿಎಸ್‌ಐ ತಂಡದೊಂದಿಗೆ ದಿಢೀರ್‌ ಭೇಟಿ ಮರಳು ವಶಕ್ಕೆ ಪಡೆದ ಬಳಿಕ ಮಾತನಾಡಿದ ಅವರು, ಪರವಾನಗಿ ಇಲ್ಲದೆ ಬೋಟ್‌ ಮತ್ತು ತೆಪ್ಪ ಬಳಸಿ ದುಡ್ಡಿನಾಸೆಗೆ ದಂಧೆಕೋರರು ರಾಶಿ ರಾಶಿ ಮರಳು ಸಂಗ್ರಹಿಸಿದ್ದಾರೆ ಎಂದರು.

ಸರ್ಕಾರ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಇಲ್ಲದೆ ನೈಸರ್ಗಿಕ ಸಂಪತ್ತು ಆಗಿರುವ ಮರಳು ಮತ್ತು ಮಣ್ಣು ಮಾರಿಕೊಳ್ಳುವುದು ಅಪರಾಧ. ಇಂಥ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಈಗಾಗಲೇ ವಶಕ್ಕೆ ಪಡೆದಿರುವ ಅಕ್ರಮ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮುಂದಿನ ಕ್ರಮ ಜರುಗಿಸುವಂತೆ ತಿಳಿಸಲಾಗಿದೆ ಎಂದರು.

ನದಿ ಪಾತ್ರದ ಮುದೇನೂರು, ನಾಗೇನಹಳ್ಳಿ, ಮಾಕನೂರು, ಕವಲೆತ್ತು, ಕೊಡಿಯಾಲ, ನಲವಾಗಲ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ ಗ್ರಾಮಗಳಲ್ಲಿ ಯುವಕರು ರಾತ್ರಿ ವೇಳೆ ಮರಳು ಸಂಗ್ರಹಿಸಿ ಹಳೆ ಬೈಕ್‌ಗಳ ಮೂಲಕ 4-5 ಮರಳಿನ ಮೂಟೆಗಳನ್ನು ಎಗ್ಗಿಲ್ಲದೆ ಸಾಗಿಸುತ್ತಾರೆ. ಮನೆ ಕಟ್ಟುವವರಿಗೆ ಒಂದು ಮೂಟೆ ₹ 40 ರಿಂದ ₹ 50 ಕ್ಕೆ ಮಾರುತ್ತಾರೆ ಎಂದು ಕೆಲ ಹಿರಿಯರು ಬೇಸರ ವ್ಯಕ್ತಪಡಿಸಿದರು.

ರಾಣೆಬೆನ್ನೂರು ತಾಲ್ಲೂಕು ತಹಶೀಲ್ದಾರ್‌ ಶಂಕರ್‌.ಜಿ.ಎಸ್‌., ಕುಮಾರಪಟ್ಟಣ ಠಾಣೆ ಪಿಎಸ್‌ಐ ಸಂಜೀವಕುಮಾರ್‌ .ಜೆಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.