ADVERTISEMENT

ಡಿ.11ರಂದು ಬೃಹತ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 16:16 IST
Last Updated 23 ನವೆಂಬರ್ 2022, 16:16 IST
ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು 
ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು    

ಹಾವೇರಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.11ರಂದು ಮಧ್ಯಾಹ್ನ 12ಕ್ಕೆ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಸಂಚಾಲಕ ಸಮಿತಿ ಸದಸ್ಯರಾದ ಪ್ರೊ.ಸಿ.ಕೆ.ಮಹೇಶ ಮತ್ತು ಅಂಬಣ್ಣ ಅರೋಲಿಕರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದೇವೆ. ನ.28ರಂದು ದಾವಣಗೆರೆ ಜಿಲ್ಲೆಯ ಹರಿಹರದ ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ಪಾದಯಾತ್ರೆ ಆರಂಭವಾಗಲಿದೆ ಎಂದರು.

ಸದಾಶಿವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ವಿಷಯವನ್ನು ಡಿ.11ರೊಳಗೆ ಹೋರಾಟ ಸಮಿತಿಗೆ ರಾಜ್ಯ ಸರ್ಕಾರ ತಿಳಿಸಬೇಕು. ತಮಿಳುನಾಡಿನ ಮಾದರಿಯಲ್ಲಿ ಆರಂಧುತಿಯರ್‌ ಸಮುದಾಯಕ್ಕೆ ಶೇ 2.84 ಮೀಸಲಾತಿ ನೀಡಿದಂತೆ ಸುಪ್ರೀಂ ಕೋರ್ಟ್‌ ನ್ಯಾ.ಅರುಣ್‌ ಮಿಶ್ರ ತೀರ್ಪಿನಂತೆ ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ–ಮಾದಿಗ ಸಂಬಂಧಿತ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನ್ಯಾ.ನಾಗಮೋಹನದಾಸ್‌ ಮತ್ತು ನ್ಯಾ.ಕಾಂತರಾಜ ವರದಿಯನ್ನು ಬಹಿರಂಗ ಮಾಡಿ, ಯಥಾವತ್ತಾಗಿ ಜಾರಿ ಮಾಡಬೇಕು. ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರ ಜನಸಂಖ್ಯೆಗೆ ತಕ್ಕ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ರಾಜ್ಯದಲ್ಲಿರುವ 43 ಸಾವಿರ ಪೌರಕಾರ್ಮಿಕರು ಮತ್ತು ವಾಹನ ಚಾಲಕರನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರು ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಹಕ್ಕೊತ್ತಾಯಗಳನ್ನು ಮಂಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೇಮರಾಜ ಅಸ್ಕಿಹಾಳ್‌, ಭಾನುಪ್ರಸಾದ್‌, ಪರಮೇಶಪ್ಪ ಮೇಗಳಮನಿ, ಸಂಜಯಗಾಂಧಿ ಸಂಜೀವಣ್ಣನವರ, ನಿಂಗಪ್ಪ, ಅಜ್ಜಯ್ಯ, ಎಂ.ಆಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.