ADVERTISEMENT

ಹಾಸ್ಟೆಲ್‌ ಕುಂದಕೊರತೆ ನಿವಾರಣೆಗೆ ‘ಸಹಾಯವಾಣಿ’ ಶೀಘ್ರ ಆರಂಭ: ಸಚಿವ ಕೋಟ ಹೇಳಿಕೆ

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 12:07 IST
Last Updated 28 ಡಿಸೆಂಬರ್ 2021, 12:07 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಹಾವೇರಿ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳ ಕುಂದುಕೊರತೆ ನಿವಾರಣೆಗೆ ಜ.10ರೊಳಗೆ ‘ಸಹಾಯವಾಣಿ’ ಆರಂಭಿಸುತ್ತೇವೆ. ಬಿಎಸ್‌ಎನ್‌ಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ‘ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾಸ್ಟೆಲ್‌ಗಳ ಕೊಠಡಿ ಹೆಚ್ಚಳಕ್ಕೆ ಬೇಡಿಕೆ ಬಂದಿದೆ. ಪ್ರತಿ ಜಿಲ್ಲೆಗೂ ಎರಡು–ಮೂರು ಹೊಸ ಹಾಸ್ಟೆಲ್‌ ತೆರೆಯಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಹೆಣ್ಣುಮಕ್ಕಳಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇವೆ ಎಂದರು.

ADVERTISEMENT

ಅಧಿಕಾರಿಗಳೇ ನೇರ ಹೊಣೆ:

ಹಾಸ್ಟೆಲ್‌ಗಳಿಗೆ ಆಹಾರ ಧಾನ್ಯ ಪೂರೈಸುವ ಟೆಂಡರ್‌ನಲ್ಲಿ ಪಾರದರ್ಶಕತೆ ತರಲು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ಪುನರ್‌ ರಚಿಸಲಾಗಿದೆ. ಯಾವ ದಾಕ್ಷಿಣ್ಯಕ್ಕೂ ಒಳಗಾಗುವುದಿಲ್ಲ. ಲೋಪದೋಷಗಳು ಕಂಡುಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ಗೆ ತಿರುಗೇಟು:

ಶೇ 40ರಷ್ಟು ಕಮಿಷನ್‌ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ನನ್ನ ಇಲಾಖೆಯಲ್ಲಿ ಶೇ 1ರಷ್ಟು ಕಮಿಷನ್ ಇದ್ದರೆ ತೋರಿಸಿ. ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳು ಹೇಳುವುದಕ್ಕೆಲ್ಲ ಉತ್ತರ ಕೊಡಬೇಕು ಅಂತೇನಿಲ್ಲ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ದೂರುಗಳಿದ್ದರೆ ತಿಳಿಸಲಿ, ಸರಿಪಡಿಸುತ್ತೇವೆ’ ಎಂದು ಪರೋಕ್ಷಾಗಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ಮೂಲ ಧರ್ಮಕ್ಕೆ ಮರಳಿದರೆ ತಪ್ಪೇನು?

ಬಿಜೆಪಿಯ ‘ಘರ್‌ ವಾಪಸಿ’ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮತಾಂತರವಾದವರು ಮೂಲ ಧರ್ಮಕ್ಕೆ ಮರಳಿ ಬಂದರೆ ತಪ್ಪೇನಿದೆ. ಮರಳಿ ಬಂದವರಿಗೆ ಇಂಥದ್ದೇ ಸ್ಥಾನಮಾನ ಕೊಡಬೇಕು ಅಂಥ ಏನೂ ಇಲ್ಲ. ಇದನ್ನು ಬಿಜೆಪಿ ಮಾತ್ರ ಹೇಳುತ್ತಿಲ್ಲ. ಒಳ್ಳೆಯವರೆಲ್ಲರೂ ಇದನ್ನೇ ಹೇಳುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಯಾವುದೇ ಮತದವರು ನೆಮ್ಮದಿಯಾಗಿ ಅವರ ಮತಗಳಲ್ಲೇ ಬದುಕಲಿ. ಬೇರೆ ಮತಕ್ಕೆ ಹೋಗುವ ಇಚ್ಛೆಯಿದ್ದರೆ ಜಿಲ್ಲಾಧಿಕಾರಿಗೆ ಅರ್ಜಿ ಕೊಡಲಿ. ಅದು ಬಿಟ್ಟು ಬೇರೆಯವರ ಪ್ರಲೋಭನೆ, ಮೋಸ, ವಂಚನೆ, ಆಮಿಷ, ಒತ್ತಡಕ್ಕೆ ಮಣಿದು ಮತಾಂತರವಾಗಬಾರದು ಎಂಬ ಉದ್ದೇಶದಿಂದ ‘ಮತಾಂತರ ನಿಷೇಧ ಕಾಯ್ದೆ’ ಜಾರಿಗೆ ತರಲಾಗಿದೆ. ಇದನ್ನು ಒಪ್ಪದವರು ಸ್ವಾರ್ಥದಿಂದ ಆಕ್ಷೇಪ ಮಾಡಿದ್ದಾರೆಯೇ ಹೊರತು ಧರ್ಮದ ಒಳಿತಿಗಾಗಿ ಅಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.