ADVERTISEMENT

ಬಿಜೆಪಿಯ ಅತೃಪ್ತ ಶಾಸಕರ ತಂಡ ರಚನೆಯಾಗಲಿದೆ: ನೆಹರು ಓಲೇಕಾರ

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಅಸಮಾಧಾನ ಸ್ಫೋಟ: ಶಾಸಕ ನೆಹರು ಓಲೇಕಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:30 IST
Last Updated 5 ಆಗಸ್ಟ್ 2021, 12:30 IST
ನೆಹರು ಓಲೇಕಾರ, ಶಾಸಕ 
ನೆಹರು ಓಲೇಕಾರ, ಶಾಸಕ    

ಹಾವೇರಿ: ‘ಸಚಿವ ಸ್ಥಾನ ಕೈತಪ್ಪಿದ ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿದ್ದೇನೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಇಂದಿನಿಂದಲೇ ಚರ್ಚೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಉಳಿದ ದಿನಗಳನ್ನು ಪೂರೈಸುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಿ’ ಎಂದು ಶಾಸಕ ನೆಹರು ಓಲೇಕಾರ ಅಸಮಾಧಾನ ಹೊರಹಾಕಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಅತೃಪ್ತ ಶಾಸಕರ ತಂಡ ರಚನೆಯಾಗಲಿದೆ. ಕಾರ್ಯಕರ್ತರ ಜತೆ ಮಾತನಾಡಿ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ. ಹಿಂದುಳಿದ ವರ್ಗದವರನ್ನು ಕಡೆಗಣಿಸಿರುವುದರಿಂದ ಸಂಪುಟದಲ್ಲಿ ಸಮತೋಲನ ಇಲ್ಲದಂತಾಗಿದೆ. ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿದಾಗಲೂ ಸುಮ್ಮಿನಿದ್ದೇನೆ. ಈ ಬಾರಿ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಪರಿಶಿಷ್ಟ ಜಾತಿಯವರನ್ನು ಕಡೆಗಣಿಸಲಾಗಿದೆ. ಹಾಗಾದರೆ ಅವರ ಬೆಂಬಲ, ಮತಗಳು ಈ ಸರ್ಕಾರಕ್ಕೆ ಬೇಡವೇ?’ ಎಂದು ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ತವರು ಜಿಲ್ಲೆಯಿಂದಲೇ ಅಸಮಾಧಾನ ಸ್ಫೋಟಗೊಳ್ಳಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ADVERTISEMENT

‘ಪಕ್ಷ ಕಟ್ಟಿ ಬೆಳೆಸಿದ ನನ್ನನ್ನು ಉದ್ದೇಶಪೂರ್ವಕವಾಗಿಯೇ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ಹಿಂದುಳಿದ ವರ್ಗದ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ.ಬಿ.ಎಸ್‌.ಯಡಿಯೂರಪ್ಪ ನೀಡಿದ ಭರವಸೆಯೂ ಹುಸಿಯಾಗಿದೆ. ಸಚಿವ ಸ್ಥಾನ ಕೈ ತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ’ ಎಂದು ನೇರವಾಗಿ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.