ADVERTISEMENT

ರಟ್ಟೀಹಳ್ಳಿ | ಪಾಳುಬಿದ್ದ ಸರ್ಕಾರಿ ಕಟ್ಟಡ: ಅಕ್ರಮ ಚಟುವಟಿಕೆ ಹೆಚ್ಚಳ

ಪ್ರದೀಪ ಕುಲಕರ್ಣಿ
Published 15 ಡಿಸೆಂಬರ್ 2025, 2:18 IST
Last Updated 15 ಡಿಸೆಂಬರ್ 2025, 2:18 IST
ರಟ್ಟೀಹಳ್ಳಿ ತಾಲ್ಲೂಕಿನ ಹಿರೇಮಾದಾಪುರ ಗ್ರಾಮದಲ್ಲಿ ಪಾಳುಬಿದ್ದಿರುವ ನೀರಾವರಿ ಇಲಾಖೆ ಕಚೇರಿ ಕಟ್ಟಡ ಹಾಗೂ ವಸತಿ ಗೃಹಗಳು
ರಟ್ಟೀಹಳ್ಳಿ ತಾಲ್ಲೂಕಿನ ಹಿರೇಮಾದಾಪುರ ಗ್ರಾಮದಲ್ಲಿ ಪಾಳುಬಿದ್ದಿರುವ ನೀರಾವರಿ ಇಲಾಖೆ ಕಚೇರಿ ಕಟ್ಟಡ ಹಾಗೂ ವಸತಿ ಗೃಹಗಳು   

ರಟ್ಟೀಹ‍ಳ್ಳಿ: ಹೊಸ ತಾಲ್ಲೂಕು ಕೇಂದ್ರವಾಗಿರುವ ರಟ್ಟೀಹಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಹಲವು ಕಡೆಗಳಲ್ಲಿ ನಿರ್ಮಿಸಿರುವ ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ಸರ್ಕಾರವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಯೋಜನೆಯಡಿ ಕಟ್ಟಡಗಳನ್ನು ನಿರ್ಮಿಸಿದ್ದು, ಹಣವೆಲ್ಲವೂ ವ್ಯರ್ಥವಾಗಿದೆ. 

‌ಪಟ್ಟಣದ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಎರಡು ಹಳೇ ಕೃಷಿ ಸಂಪರ್ಕ ಕೇಂದ್ರಗಳ ಕಟ್ಟಡವು ಬಳಕೆಯಾಗದೇ ಹಾಳಾಗಿವೆ. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಸಂತೆ ಮಾರುಕಟ್ಟೆಯಲ್ಲಿ ನಿರ್ಮಾಣಗೊಂಡ ಹಳೆಯ ಪಟ್ಟಣ ಪಂಚಾಯಿತಿ ಕಟ್ಟಡವೂ ಸಂಪೂರ್ಣ ನೆಲಕಚ್ಚಿದೆ.

ADVERTISEMENT

ಸದ್ಯ ಇರುವ ತಹಶೀಲ್ದಾರ ಕಚೇರಿ ಎದುರಿಗೆ ಇರುವ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಕಟ್ಟಡಗಳು, ವಸತಿಗೃಹಗಳು, ಗೋದಾಮುಗಳು ಬಳಕೆಯಾಗದೆ ಹಾಳಾಗಿವೆ. ಕಟ್ಟಡಗಳ ಸುತ್ತಲೂ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ವಿಷಜಂತುಗಳ ತಾಣವಾಗಿ ಮಾರ್ಪಟ್ಟಿವೆ.

ರಟ್ಟೀಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿ ಗೃಹಗಳು ಸಂಪೂರ್ಣ ಹಾಳಾಗಿವೆ. ಕಡೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಕಟ್ಟಡ ಹಾಗೂ ವಸತಿಗೃಹಗಳು ಹಾಳಾಗಿವೆ. ತಾಲ್ಲೂಕಿನ ಹಿರೇಮಾದಾಪುರ ಗ್ರಾಮದ ನೀರಾವರಿ ಇಲಾಖೆಗೆ ಸಂಬಂಧಿಸಿದ ಜಲಮಾಪನ ಕೇಂದ್ರದ ಕಚೇರಿಯ ಕಟ್ಟಡ ಹಾಗೂ ವಸತಿ ಗೃಹಗಳು ಪ್ರಾರಂಭದಿಂದಲೂ ಬಳಕೆಯಾಗದೇ ಪಾಳು ಬಿದ್ದಿವೆ.

ತಾಲ್ಲೂಕಿನ ಕುಡುಪಲಿ ಗ್ರಾಮದ ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರ ವಸತಿ ಗೃಹಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ತಾಲ್ಲೂಕಿನಲ್ಲಿ ಇನ್ನೂ ಹಲವು ಸರ್ಕಾರಿ ಕಟ್ಟಡಗಳು ಬಳಕೆಯಾಗದೇ ನಿರುಪಯುಕ್ತವಾಗಿವೆ. ಮದ್ಯ ಕುಡಿಯಲು, ಜೂಜು ಆಡಲು ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಪಾಳು ಬಿದ್ದ ಕಟ್ಟಡಗಳು ಬಳಕೆಯಾಗುತ್ತಿವೆ.

ರಟ್ಟೀಹಳ್ಳಿ ಪಟ್ಟಣದಲ್ಲಿ ಕೃಷಿ ಇಲಾಖೆಯ ಪಾಳುಬಿದ್ದ ಕಟ್ಟಡ 

ಹೆಸರಿಗೆ ಅಷ್ಟೇ ತಾಲ್ಲೂಕು

ರಟ್ಟಿಹಳ್ಳಿ ತಾಲ್ಲೂಕು ಎಂದು ಘೋಷಣೆಯಾಗಿದ್ದರೂ ಪೂರ್ಣಪ್ರಮಾಣದ ಸೌಲಭ್ಯಗಳಿಲ್ಲದೇ ನೆರವಳುವಂತೆ ಆಗಿದೆ. ಪಾಳು ಬಿದ್ದ ಕಟ್ಟಡಗಳ ಬಾಗಿಲು ಕಿಟಕಿ ಹಾಳಾಗಿವೆ. ಕಟ್ಟಡವು ಭಾಗಶಃ ಶಿಥಿಲಗೊಂಡಿವೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ್ದ ಕಟ್ಟಡಗಳು ಪಾಳು ಬಿದ್ದಿರುವುದನ್ನು ಸ್ಥಳೀಯರ ಆಕ್ರೋಶ ಹೊರಹಾಕುತ್ತಿದ್ದಾರೆ.

ಕಟ್ಟಡ ಹಾಳಾಗಲು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಜನರು ದೂರುತ್ತಿದ್ದಾರೆ.

‘ಸರ್ಕಾರಿ ಯೋಜನೆಯಡಿ ನಿರ್ಮಿಸಿರುವ ಸರ್ಕಾರಿ ಕಟ್ಟಡಗಳ ರಕ್ಷಣೆ ಹೊಣೆ ಸಂಬಂಧಿಸಿದ ಅಧಿಕಾರಿಗಳ ಮೇಲಿರುತ್ತದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಕಾರಣದಿಂದ ಕಟ್ಟಡ ಹಾಳಾಗಿವೆ. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

‘ಇಲಾಖೆಯ ಬೇಡಿಕೆಗೆ ಅನುಸಾರವಾಗಿ ಕಟ್ಟಡಗಳನ್ನು ಸರ್ಕಾರ ಮಂಜೂರು ಮಾಡಿರುತ್ತದೆ. ಆದರೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸರ್ಕಾರದ ಉದ್ದೇಶಕ್ಕೆ ಧಕ್ಕೆ ಬಂದಿದೆ. ಪಾಳು ಬಿದ್ದಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸಿ ಅಗತ್ಯವಿರುವ ಕಚೇರಿಗಳಿಗೆ ಹಸ್ತಾಂತರಿಸಬೇಕು’ ಎಂದುಒತ್ತಾಯಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.