ADVERTISEMENT

ಜವಳಿ ಉದ್ಯಮದಿಂದ ವಿಪುಲ ಉದ್ಯೋಗ: ಬಸವರಾಜ ಬೊಮ್ಮಾಯಿ

ಔದ್ಯೋಗಿಕ ಕ್ರಾಂತಿಯಿಂದ ಆರ್ಥಿಕ ಪ್ರಗತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 14:07 IST
Last Updated 28 ಏಪ್ರಿಲ್ 2022, 14:07 IST
ಶಿಗ್ಗಾವಿ ತಾಲ್ಲೂಕು ಮುನವಳ್ಳಿ ಗ್ರಾಮದ ಸಮೀಪ ಶಾಹಿ ಎಕ್ಸ್‌ಪೋರ್ಟ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಇದ್ದಾರೆ
ಶಿಗ್ಗಾವಿ ತಾಲ್ಲೂಕು ಮುನವಳ್ಳಿ ಗ್ರಾಮದ ಸಮೀಪ ಶಾಹಿ ಎಕ್ಸ್‌ಪೋರ್ಟ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಇದ್ದಾರೆ   

ಹಾವೇರಿ: ‘ಜವಳಿ ಮತ್ತು ಸಿದ್ಧ ಉಡುಪುಗಳ ತಯಾರಿಕೆ ವಲಯ ಹೆಚ್ಚು ಜನರಿಗೆ ಉದ್ಯೋಗ ಕೊಡುವ ವಲಯವಾಗಿದೆ. ವಿದೇಶಕ್ಕೆ ಹೆಚ್ಚು ರಫ್ತಾಗುವ ಡಾಲರ್ ಮೂಲಕ ಹೆಚ್ಚು ಆದಾಯ ತರುವ ಉದ್ಯಮವಾಗಿದೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ದಾರಿಯಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಶಿಗ್ಗಾವಿ ತಾಲ್ಲೂಕು ಮುನವಳ್ಳಿ ಗ್ರಾಮದ ಸಮೀಪ ಗುರುವಾರ ಶಾಹಿ ಎಕ್ಸ್‌ಪೋರ್ಟ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜವಳಿ ಉದ್ಯಮವನ್ನು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಶಿಗ್ಗಾವಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಜವಳಿ ಉದ್ಯಮಗಳಿಂದ ನಾಲ್ಕು ಸಾವಿರಕ್ಕಿಂತ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಶಾಹಿ ಗಾರ್ಮೆಂಟ್ಸ್‍ನವರು ಎರಡು ಸಾವಿರ ಮಷಿನ್ ಹಾಕಲು ಎರಡು ಲಕ್ಷ ಚ.ಮೀಟರ್ ಕಾರ್ಖಾನೆ ನಿರ್ಮಿಸುತ್ತಿದ್ದಾರೆ. ಇಲ್ಲಿ ನಾಲ್ಕರಿಂದ ಐದು ಸಾವಿರ ಉದ್ಯೋಗ ದೊರೆಯಲಿದೆ ಎಂದರು.

ADVERTISEMENT

ಜ್ಞಾನದ ಶತಮಾನ:

ಕಾಲ ಬದಲಾಗುತ್ತಿದೆ, ಒಂದು ಕಾಲದಲ್ಲಿ ಭೂಮಿ, ಹಣ, ಉದ್ಯೋಗ ಇದ್ದವರು ದೊಡ್ಡವರು ಎಂದು ಹೇಳಲಾಗುತ್ತಿತ್ತು. 21ನೇ ಶತಮಾನ ಜ್ಞಾನದ ಶತಮಾನವಾಗಿದೆ, ಮೊದಲು ಜ್ಞಾನ ಇತ್ತು, ಜ್ಞಾನಕ್ಕೆ ವಿಜ್ಞಾನ, ತಂತ್ರಜ್ಞಾನ ಸೇರಿ ಬದಲಾವಣೆಯಾಗುತ್ತಿದೆ. ಭೂಮಿ ಅಷ್ಟೇ ಇದೆ, ಭೂಮಿ ಮೇಲೆ ಅಲಂಬಿತರು ಹೆಚ್ಚಾಗಿದ್ದಾರೆ. ರೈತರು ಹಾಗೂ ಕಾರ್ಮಿಕರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಮೊದಲು ನೀರವಾರಿ ಹಾಗೂ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅನ್ನದಾನ ರೈತನ ಬದುಕನ್ನು ಸಂತೃಪ್ತಗೊಳಿಸಿದ್ದಾರೆ. ಶಿಗ್ಗಾವಿ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ನನ್ನ ಮೇಲೆ ವಿಶೇಷ ಒತ್ತು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಶಾಹಿ ಎಕ್ಸ್‌ಪೋರ್ಟ್ಸ್‌ನ ರಾಘವನ್‌, ಬಾಲಕೃಷ್ಣ ಶೆಟ್ಟಿ, ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.