ADVERTISEMENT

2.75 ಲಕ್ಷ ಮಕ್ಕಳ ರಕ್ಷಣೆಗೆ ಕ್ರಮ: ಬೊಮ್ಮಾಯಿ

ಕೊರೊನಾ ಮೂರನೇ ಅಲೆಯಿಂದ ರಕ್ಷಿಸಲು ‘ಮಕ್ಕಳ ಆರೋಗ್ಯ ಶಿಬಿರ’ಕ್ಕೆ ಸಚಿವ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 13:49 IST
Last Updated 24 ಜೂನ್ 2021, 13:49 IST
ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಸಚಿವ ಬಸವರಾಜ ಬೊಮ್ಮಾಯಿ ಮಕ್ಕಳಿಗೆ ‘ಪೌಷ್ಟಿಕ ಆಹಾರದ ಕಿಟ್‌’ ವಿತರಿಸಿದರು. ಶಾಸಕ ನೆಹರು ಓಲೇಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಇದ್ದಾರೆ 
ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಸಚಿವ ಬಸವರಾಜ ಬೊಮ್ಮಾಯಿ ಮಕ್ಕಳಿಗೆ ‘ಪೌಷ್ಟಿಕ ಆಹಾರದ ಕಿಟ್‌’ ವಿತರಿಸಿದರು. ಶಾಸಕ ನೆಹರು ಓಲೇಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಇದ್ದಾರೆ    

ಹಾವೇರಿ: ‘ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ರಾಜ್ಯದಲ್ಲೇ ಪ್ರಥಮವಾಗಿ ಹಾವೇರಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ‘ಮಕ್ಕಳ ಆರೋಗ್ಯ ತಪಾಸಣೆ’ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ ಎಂದು ಹೇಳಿದರು.

ಜೂನ್ 25ರಿಂದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಆರಂಭಗೊಳ್ಳಲಿದೆ. ಜುಲೈ 30ರೊಳಗಾಗಿ ಜಿಲ್ಲೆಯ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಲಸಿಕೆ ಹಾಕಲು ಕ್ರಮವಹಿಸಲಾಗಿದೆ ಎಂದರು.

ADVERTISEMENT

ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ಮುಂದಿನ ಮೂರು ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಟಿಕ ಆಹಾರ, ಔಷಧಗಳನ್ನು ಒದಗಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ‘ಮಕ್ಕಳಿಗೆ ಸಣ್ಣ ಜ್ವರ, ನೆಗಡಿಯಾದರೂ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಮಕ್ಕಳನ್ನು ತಪಾಸಣೆಗೆ ಕರೆದುಕೊಂಡು ಹೋಗಬೇಡಿ. ಬೇರೆಯವರ ಮನೆಗೆ ಮಕ್ಕಳನ್ನು ಕಳುಹಿಸಬೇಡಿ. ಕೊರೊನಾದಿಂದ ಮಕ್ಕಳನ್ನು ಜೋಪಾನ ಮಾಡಿ’ ಎಂದು ಮನವಿ ಮಾಡಿಕೊಂಡರು.

ಪೌಷ್ಟಿಕ ಕಿಟ್ ವಿತರಣೆ:

ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್, ಅಕ್ಷರ ದಾಸೋಹದಡಿ ಆಹಾರದ ಕಿಟ್, ಅಂಗವಾಡಿ ಮಕ್ಕಳಿಗೆ ಔಷಧಿ ಕಿಟ್, ಕಡಿಮೆ ತೂಕದ ಮಕ್ಕಳಿಗೆ ಪೂರಕ ಪೌಷ್ಟಿಕ ಪ್ರೋಟಿನ್ ಕಿಟ್‍ಗಳನ್ನು ಸಚಿವ ಮತ್ತು ಶಾಸಕ ವಿತರಿಸಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿಎಚ್‌ಒ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಡಿಪಿಐ ಅಂದಾನಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ನಗರಸಭೆ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.