ADVERTISEMENT

ಮಕ್ಕಳ ಸಮಸ್ಯೆ ಪರಿಹರಿಸಲು ಕ್ರಮ: ಭಾರತಿ ವಾಳ್ವೇಕರ ಹೇಳಿಕೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 15:18 IST
Last Updated 10 ನವೆಂಬರ್ 2021, 15:18 IST
ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಅಹವಾಲು ವಿಚಾರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಮಾತನಾಡಿದರು 
ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಅಹವಾಲು ವಿಚಾರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಮಾತನಾಡಿದರು    

ಹಾವೇರಿ: ‘ಮಕ್ಕಳು ತಮ್ಮ ಸಮಸ್ಯೆಗಳನ್ನು ತಿಳಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ. ಯಾವುದೇ ಸಮಸ್ಯೆಗಳನ್ನು ಇಲ್ಲಿ ಇಳಿಸುವ ಮೂಲಕ ಮಕ್ಕಳು ಈ ವೇದಿಕೆ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್‌ ಹೈದ್ರಾಬಾದ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕೋವಿಡ್-19ರ ಸಂದರ್ಭದಲ್ಲಿ ಮಕ್ಕಳ ಮೇಲಿನ ದುಷ್ಪರಿಣಾಮಗಳ ಕುರಿತು ಸಂವಾದ ಮತ್ತು ಮಕ್ಕಳ ಅಹವಾಲು ವಿಚಾರಣೆ ಕುರಿತು ಪೂರ್ವಭಾವಿ ಸಭೆ ಹಾಗೂ ಮಕ್ಕಳ ಹಕ್ಕುಗಳು ಪೋಕ್ಸೊ ಕಾಯ್ದೆ 2012 ಮತ್ತು ಬಾಲನ್ಯಾಯ ಕಾಯ್ದೆ 2015 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್-19ರ ಸಂದರ್ಭದಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯಗಳು, ಕಿರುಕುಳ, ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದುಕೊಂಡು ವಲಯಮಟ್ಟದಲ್ಲಿ ಸೂಕ್ತ ಪರಿಹಾರ ನೀಡಲು ರಾಜ್ಯದ ಏಳು ವಲಯಗಳಲ್ಲಿ ಸಾರ್ವಜನಿಕ ಮಕ್ಕಳ ಅಹವಾಲು ವಿಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಹಾವೇರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ ನಾಲ್ಕು ಜಿಲ್ಲೆಗಳು ಸೇರಿ ಬಾಗಲಕೋಟೆಯಲ್ಲಿ ನ.16ರಂದು ವಿಭಾಗೀಯ ಮಟ್ಟದ ಸಾರ್ವಜನಿಕ ಮಕ್ಕಳ ಅಹವಾಲು ಸ್ವೀಕಾರ, ವಿಚಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಲ್ಕು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಮಕ್ಕಳ ಸ್ನೇಹಿ ಕೋರ್ಟ್ ಇರುತ್ತದೆ. ಇಲ್ಲಿ ಸಲ್ಲಿಕೆಯಾದ ಅಹವಾಲುಗಳಿಗೆ ಪೂರಕವಾದ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಮಕ್ಕಳು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಶಿಕ್ಷಣಕ್ಕೆ ಒತ್ತು ನೀಡಬೇಕು. ನಿಮ್ಮ ಗುರಿಯತ್ತ ಗಮನ ಹರಿಸಿ, ಪೋಷಕರು, ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಿ. ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಮಕ್ಕಳ ರಕ್ಷಣೆ ಕುರಿತಾದ ಕಾನೂನುಗಳನ್ನು ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಹಾಗೂ ಡಿವೈಎಸ್ಪಿ ಶಂಕರ ಮಾರಿಹಾಳ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್. ಅಡಿಗ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಎಚ್. ಮಜೀದ್‌ ಹಾಗೂ ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲೆ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.