ADVERTISEMENT

ನಟಿ ಸುಧಾ ನರಸಿಂಹರಾಜು ಅವರಿಗೆ ಪೊಲೀಸರಿಂದ ದಿಗ್ಭಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 22:21 IST
Last Updated 6 ಜನವರಿ 2023, 22:21 IST
ಸುಧಾ ನರಸಿಂಹರಾಜು
ಸುಧಾ ನರಸಿಂಹರಾಜು   

ಹಾವೇರಿ: ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ‘ಶತಮಾನ ಪುರುಷರು’ ಗೋಷ್ಠಿಗೆ ತಮ್ಮ ತಂದೆ ಖ್ಯಾತ ನಟ ನರಸಿಂಹರಾಜು ಕುರಿತು ಮಾತನಾಡಲು ಬಂದಿದ್ದ ಅವರ ಪುತ್ರಿ ಹಾಗೂ ನಟಿ ಸುಧಾ ನರಸಿಂಹರಾಜು ಅವರಿಗೆ, ಪೊಲೀಸರು ಪ್ರಧಾನ ವೇದಿಕೆ ಬಳಿ ಒಂದು ತಾಸು ದಿಗ್ಬಂಧನ ಹಾಕಿದರು.

‘ಮಧ್ಯಾಹ್ನ 2ಕ್ಕೆ ನಿಗದಿಯಾಗಿದ್ದ ಗೋಷ್ಠಿಗೆ ಬಂದಿದ್ದ ನನ್ನನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ನರಸಿಂಹರಾಜು ಅವರ ಕುರಿತು ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಬಂದಿರುವೆ ದಯವಿಟ್ಟು ಬಿಡಿ ಎಂದರೂ ಕೇಳಲಿಲ್ಲ. ಸಂಘಟಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ವಿಧಿ ಇಲ್ಲದೆ ಒಂದು ತಾಸು ಅಲ್ಲೇ ನಿಂತಿದ್ದೆ. ಕಡೆಗೆ ಸಂಘಟಕರೇ ವಾಪಸ್ ಕರೆ ಮಾಡಿ, ಸ್ಥಳಕ್ಕೆ ಬಂದು ಕರೆದೊಯ್ದರು’ ಎಂದು ಗೋಷ್ಠಿ ಬಳಿಕ ಸುಧಾ ಅವರು ಸುದ್ದಿಗಾರರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಾಹ್ನ 2 ಗಂಟೆಯ ಗೋಷ್ಠಿಗೆ ಸಂಜೆ 4.10ರ ಸುಮಾರಿಗೆ ಬಂದಾಗ ವಂದನಾರ್ಪಣೆ ಕಾರ್ಯಕ್ರಮ ನಡೆಯುತ್ತಿತ್ತು. ಗೋಷ್ಠಿಯ ಅಧ್ಯಕ್ಷರ ಅಪ್ಪಣೆ ಮೇರೆಗೆ ಸುಧಾ ಅವರು ಮಾತನಾಡಿದರು.

ADVERTISEMENT

‘ಅಶ್ಲೀಲ ಪ್ರೇಕ್ಷಕ–ನಿರ್ಮಾಪಕನಿಗೆ ಸಂಬಂಧಿಸಿದ್ದು’

‘ಕಿರುತೆರೆ ಇರಲಿ, ಬೆಳ್ಳಿತೆರೆ ಇರಲಿ ಅಲ್ಲಿ ಮೂಡಿಬರುವ ಅಶ್ಲೀಲ ವಿಚಾರಗಳು ಪ್ರೇಕ್ಷಕ ಹಾಗೂ ನಿರ್ಮಾಪಕನಿಗೆ ಸಂಬಂಧಿಸಿದ್ದಾಗಿದೆ. ಒಳ್ಳೆಯ ಪ್ರೇಕ್ಷಕ ಇರುವವರೆಗೆ ಒಳ್ಳೆಯ ಅಭಿರುಚಿಯುಳ್ಳ ಸಿನಿಮಾಗಳು ಬಂದೇ ಬರುತ್ತವೆ. ಅದು ಚಿತ್ರ ನಿರ್ಮಾಪಕನಿಗೂ ಅನ್ವಯಿಸುತ್ತದೆ. ಪ್ರೇಕ್ಷಕನ ಮನಃಸ್ಥಿತಿ ಅವಲಂಬಿಸಿ ನಿರ್ಮಾಪಕ ಸಿನಿಮಾ ಮಾಡುತ್ತಾನೆ ಹೊರತು ಆತನಿಗೆ ಬೇರೆ ಉದ್ದೇಶ ಇರುವುದಿಲ್ಲ. ಆದರೆ, ಕೆಲವೊಮ್ಮೆ ಲಾಭಕ್ಕಾಗಿಯೂ ಆ ತರಹದ ಚಿತ್ರಗಳನ್ನು ಮಾಡಲಾಗುತ್ತದೆ’ ಎಂದು ಹಿರಿಯ ನಟ ಎಚ್‌.ಜಿ. ದತ್ತಾತ್ರೇಯ (ದತ್ತಣ್ಣ) ಸಭಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಶುಕ್ರವಾರ ಸಂಜೆ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಬೆಳ್ಳಿತೆರೆ–ಕಿರುತೆರೆ’ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದರು.

‘ಸಿನಿಮಾ ವಾಣಿಜ್ಯ ಉದ್ದೇಶ ಹೊಂದಿದೆ. ಐಟಂ ಸಾಂಗ್‌, ಫೈಟ್‌ ಎಲ್ಲವೂ ಇರುತ್ತೆ. ಆದರೆ, ಅದಷ್ಟೇ ಸಿನಿಮಾವಲ್ಲ. ಅದರಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ವಿಷಯ ಇದ್ದರೆ ಜನರಿಗೆ ಹೆಚ್ಚು ಹತ್ತಿರವಾಗುತ್ತದೆ. ಸಿನಿಮಾಗಳ ಜನಪ್ರಿಯತೆಯ ನಡುವೆಯೂ ಕಿರುತೆರೆ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ, ಸಿನಿಮಾ ರಂಗಕ್ಕೆ ಸರ್ಕಾರ ಸಾಲ ಸೌಲಭ್ಯ, ಸಬ್ಸಿಡಿ ಕೊಡುವ ಪದ್ಧತಿ ಬದಲಾಗಬೇಕು. ನಿಯಮಗಳು ಸರಳವಾದರೆ ಸಿನಿಮಾ ಮಾಡುವವರಿಗೆ ಹೆಚ್ಚು ಅನುಕೂಲವಾಗುತ್ತದೆ. ರಂಗವೂ ಬೆಳೆಯುತ್ತದೆ’ ಎಂದು ಅಭಿಪ್ರಾಯ ಪಟ್ಟರು.

ಸಾಮಾನ್ಯರ ಸಾಲಿನಲ್ಲಿ ದತ್ತಣ್ಣ

ಹಿರಿಯ ನಟ ದತ್ತಣ್ಣ ಅವರು, ಸಾಮಾನ್ಯರಂತೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಗೋಷ್ಠಿಯನ್ನು ಆಲಿಸಿ ಗಮನ ಸೆಳೆದರು. ವೇದಿಕೆಯ ಹಿಂಭಾಗದಿಂದ ಬಂದ ಅವರು, ಮುಂಭಾಗದ ಆಸನಗಳನ್ನು ಬಿಟ್ಟು, ಹಿಂಭಾಗಕ್ಕೆ ಹೋಗಿ ಕುಳಿತರು.

ದತ್ತಣ್ಣ ಅವರನ್ನು ಕಂಡ ಸಾಹಿತ್ಯಾಭಿಮಾನಿಗಳು, ಅವರೊಂದಿಗೆ ಫೋಟೊ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಿರಿಯ ನಟನನ್ನು ಮಾತನಾಡಿಸಿ ಖುಷಿಪಟ್ಟರು. ಸ್ಥಳದಲ್ಲಿದ್ದ ಸಮ್ಮೇಳನ ಆಯೋಜಕರು ವೇದಿಕೆ ಮುಂಭಾಗಕ್ಕೆ ಬರುವಂತೆ ಆಹ್ವಾನಿಸಿದರೂ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.