ADVERTISEMENT

ಖಾಟಿಕ್‌‌ ಸಮುದಾಯವನ್ನು ಎಸ್‌.ಸಿ.ಗೆ ಸೇರಿಸಿ: ನಾಗರಾಜ ಜೋರಾಪುರಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:00 IST
Last Updated 4 ಮಾರ್ಚ್ 2021, 15:00 IST
ನಾಗರಾಜ ಜೋರಾಪುರಿ
ನಾಗರಾಜ ಜೋರಾಪುರಿ   

ಹಾವೇರಿ: ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾಗಿ ಬದುಕು ಸಾಗಿಸುತ್ತಿರುವ ಖಾಟಿಕ್‌ ಸಮುದಾಯವನ್ನು ಪರಿಶಿಷ್ಟ ಜಾತಿಗೆ (ಎಸ್‌.ಸಿ) ಸೇರಿಸಬೇಕು ಎಂದು ‘ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ್‌ ಸಮಾಜ’ದ ರಾಜ್ಯ ಉಪಾಧ್ಯಕ್ಷ ನಾಗರಾಜ ಜೋರಾಪುರಿ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಖಾಟಿಕ್‌ ಸಮುದಾಯದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಿದ ಶಿವಮೊಗ್ಗದ ಕುವೆಂಪು ವಿ.ವಿ.ಯ ಪ್ರೊ.ಎಂ.ಗುರುಲಿಂಗಯ್ಯ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಖಾಟಿಕ್‌ ಉಪಜಾತಿಗಳಾದ ಕಾಟಿಕ್‌, ಕಟುಕ, ಕಟುಗ, ಕಲಾಲ್‌, ಸೂರ್ಯವಂಶ ಕ್ಷತ್ರಿಯ, ಹಿಂದೂ ಕಲಾಲ, ಹಿಂದೂ ಕಾಟಿಕ್‌, ಶೆರೆಗಾರ, ಅರೆಕಸಾಯಿ, ಅರೆ ಖಾಟಿಕಲು, ಕಲಾಲ್‌ ಖಾಟಿಕ್‌, ಕಸಾಬ, ಕಸಾಯಿ ಮರಟ್ಟಿ ಹೀಗೆ ಅನೇಕ ಹೆಸರುಗಳಿಂದ ನಮ್ಮ ಸಮುದಾಯವನ್ನು ಗುರುತಿಸಲಾಗುತ್ತದೆ. ಕುರಿ ಮತ್ತು ಮೇಕೆ ಮಾಂಸ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದೇವೆ. ನಮ್ಮನ್ನು ಮುಟ್ಟಿಸಿಕೊಳ್ಳಲು ಇತರರು ಅಸಹ್ಯ ಪಡುತ್ತಾರೆ ಎಂದು ನೋವು ತೋಡಿಕೊಂಡರು.

ADVERTISEMENT

ರಾಜ್ಯದಲ್ಲಿ ಒಂದೂವರೆ ಲಕ್ಷ ಜನಸಂಖ್ಯೆ ಇದ್ದು,ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ. ದೇಶದ 13 ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಎಸ್‌.ಸಿ.ಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ ಪ್ರವರ್ಗ 1 ಮತ್ತು 2ಎ ನಲ್ಲಿರುವ ನಮ್ಮ ಎಲ್ಲ ಉಪಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಆರ್‌.ಕಲಾಲ‌, ಬಸವರಾಜ ಕಲಾಲ, ರೇಖಾಬಾಯಿ ಕಲಾಲ, ಧರ್ಮರಾಜ್‌ ಖಜೂರ್‌ಕರ, ಕೃಷ್ಣಾ ಜಾನ್ವೇಕರ, ಗಣೇಶ ಖಜೂರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.