ADVERTISEMENT

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ಸದಾಶಿವ ಸ್ವಾಮೀಜಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಜನಜಾಗೃತಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:06 IST
Last Updated 18 ಡಿಸೆಂಬರ್ 2025, 2:06 IST
ಹಾವೇರಿಯ ಅಶ್ವಿನಿನಗರದ ಶಿರಡಿ ಸಾಯಿಬಾಬಾ ಮಂದಿರ ಬಳಿ ಬುಧವಾರ ಹಮ್ಮಿಕೊಂಡಿದ್ದ ‘ಜನಜಾಗೃತಿ ಪಾದಯಾತ್ರೆ’ಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು
ಹಾವೇರಿಯ ಅಶ್ವಿನಿನಗರದ ಶಿರಡಿ ಸಾಯಿಬಾಬಾ ಮಂದಿರ ಬಳಿ ಬುಧವಾರ ಹಮ್ಮಿಕೊಂಡಿದ್ದ ‘ಜನಜಾಗೃತಿ ಪಾದಯಾತ್ರೆ’ಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು   

ಹಾವೇರಿ: ‘ಇಂದಿನ ದಿನಮಾನಗಳಲ್ಲಿ ಯುವಸಮೂಹ ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನತೆಯ ಅಮೂಲ್ಯವಾದ ಬದುಕು ಕಮರುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಇಲ್ಲಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ನಿಮಿತ್ತ ಅಶ್ವಿನಿನಗರದ ಶಿರಡಿ ಸಾಯಿಬಾಬಾ ಮಂದಿರ ಬಳಿ ಬುಧವಾರ ಹಮ್ಮಿಕೊಂಡಿದ್ದ ‘ಜನಜಾಗೃತಿ ಪಾದಯಾತ್ರೆ’ಯಲ್ಲಿ ಅವರು ಆಶೀರ್ವಚನ ನೀಡಿದರು.

‘ಇಂದಿನ ಯುವಕರು ಧರ್ಮದ ಹಾದಿಯಲ್ಲಿ ಸಾಗಬೇಕಿದೆ. ಧರ್ಮ ಪಾಲಿಸಿ ನಡೆದರೆ, ಜೀವನವೂ ಉಜ್ವಲವಾಗಲಿದೆ. ದುಶ್ಚಟಗಳನ್ನು ದೂರವಿಟ್ಟು ಆರೋಗ್ಯ ಮತ್ತು ಆಯುಷ್ಯ ಹೆಚ್ಚಿಸಲು ಹೋಮ ಮಾಡಬೇಕಿದೆ’ ಎಂದರು.

ADVERTISEMENT

‘ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪೂಜಿಸುವ ಪರಂಪರೆ ಭಾರತದಲ್ಲಿದೆ. ಬೆಳಗ್ಗೆ ಬೇಗನೇ ಏಳುವ ಜನರಿಗೆ, ದುಃಖವನ್ನು ದೂರ ಮಾಡುವ ಶಕ್ತಿಯಿದೆ. ಜನಜಾಗೃತಿ ಪಾದಯಾತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ. ಎಲ್ಲರೂ ಸೇರಿ ಹಾವೇರಿ ಮರಿ ಕಲ್ಯಾಣ ಎಂಬುದನ್ನು ಸಾಬೀತುಪಡಿಸಿದ್ದೀರಿ’ ಎಂದು ಹೇಳಿದರು.

ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಬದುಕಿನ ಕೊನೆಯ ಗಳಿಗೆಯಲ್ಲೂ ನಮ್ಮ ಜೊತೆಗೆ ಧರ್ಮ ಬರುತ್ತದೆ. ಭೌತಿಕ ಸಂಪತ್ತು ಬರುವುದಿಲ್ಲ. ಧರ್ಮವನ್ನು ಯಾರೂ ದೂರ ಮಾಡಬಾರದು. ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು’ ಎಂದರು.

‘ಸ್ವಾಮೀಜಿಗಳ ಸಮೇತ ಭಕ್ತರ ಮನೆ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಇದೊಂದು ಅಮೃತ ಗಳಿಗೆ ಹಾಗೂ ಭಕ್ತರ ಭಕ್ತಿಯ ಉತ್ಸವ. ಡಿ. 27ರಂದು ಬಸವ ಬುತ್ತಿ ಕಾರ್ಯಕ್ರಮ ಜರುಗಲಿದೆ. ಪ್ರತಿ ಮನೆಗೂ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಬಟ್ಟೆ ಕೊಡಲಾಗುವುದು. ಅದನ್ನು ಧರಿಸಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಮಾದನಹಿಪ್ಪರಗಿಯ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಭಕ್ತಿ ಎಂಬ ಬಿರುಗಾಳಿ ಬೀಸುತ್ತಿರುವ ಈ ಸಂದರ್ಭದಲ್ಲಿ ದುಶ್ಚಟಗಳನ್ನು ತೂರಬೇಕಿದೆ’ ಎಂದರು.

ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿದ್ದರು.

55 ಭಕ್ತರಿಂದ ತುಲಾಭಾರ; ₹ 6.05 ಲಕ್ಷ ದೇಣಿಗೆ

ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶಿವಬಸವ ಸ್ವಾಮೀಜಿಯವರ ಮೂರ್ತಿಯ ತುಲಭಾರ ಮಾಡುವ ಮೂಲಕ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಅಶ್ವಿನಿನಗರದಲ್ಲಿ ಬುಧವಾರ ನಡೆದ ಜನಜಾಗೃತಿ ಪಾದಯಾತ್ರೆ ಸಂದರ್ಭದಲ್ಲಿ 55 ಭಕ್ತರು ತುಲಾಭಾರ ನೆರವೇರಿಸುವ ಮೂಲಕ ₹ 6.05 ದೇಣಿಗೆ ನೀಡಿದರು. ಪಾದಯಾತ್ರೆ ಸಂದರ್ಭದಲ್ಲಿ ಒಂದು ಪ್ರದೇಶದ ಜನರು ನೀಡಿದ ದೇಣಿಗೆಯಲ್ಲಿ ಇದು ಅತೀ ಹೆಚ್ಚು ದೇಣಿಗೆ ಎನಿಸಿಕೊಂಡಿದೆ. ‘ಶಿವಬಸವ ಸ್ವಾಮೀಜಿಯವರ 16 ಕೆ.ಜಿ. ಮೂರ್ತಿಯನ್ನು ತುಲಭಾರ ಮಾಡಲು ಅವಕಾಶವಿದೆ. ಅಶ್ವಿನಿನಗರದ 55 ಭಕ್ತರು ತುಲಭಾರ ಮಾಡಿ ಒಂದೇ ದಿನ ₹ 6.05 ಲಕ್ಷ ದೇಣಿಗೆ ನೀಡಿದ್ದಾರೆ’ ಎಂದು ಜಾತ್ರಾ ಸಮಿತಿಯ ಶಿವರಾಜ ಸಜ್ಜನರ ಹೇಳಿದರು.

4000 ಹೋಳಿಗೆ ಕೊಟ್ಟ ಕಾಕೋಳ ಭಕ್ತರು

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದಂದು ದಾಸೋಹ ಮಾಡಲು ಕಾಕೋಳ ಗ್ರಾಮದ ಭಕ್ತರು ಬುಧವಾರ 4000 ಹೋಳಿಗ ನೀಡಿದ್ದಾರೆ. 22 ಕ್ವಿಂಟಲ್ ಅಕ್ಕಿಯನ್ನೂ ಕೊಟ್ಟಿದ್ದಾರೆ. ಗುಂಡೇನಹಳ್ಳಿಯ ಭಕ್ತರು 6 ಕ್ವಿಂಟಲ್ ತೊಗರಿಬೇಳೆ 1 ಸಾವಿರ ರೊಟ್ಟಿ 8000 ಖರ್ಚಿಕಾಯಿ ನೀಡಿದ್ದಾರೆ. ಗಣಜೂರಿನ ಭಕ್ತರು 25 ಕ್ವಿಂಟಲ್ ರವಾ 2000 ರೊಟ್ಟಿ 1ಕ್ವಿಂಟಲ್ ಬೆಲ್ಲ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.