ADVERTISEMENT

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 15:06 IST
Last Updated 20 ಮಾರ್ಚ್ 2020, 15:06 IST
ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾವೇರಿ ನಗರದ ಮೀನು ಮಾರುಕಟ್ಟೆಯನ್ನು ಶುಕ್ರವಾರ ನಗರಸಭೆ ಸಿಬ್ದಂದಿ ಬಂದ್‌ ಮಾಡಿಸಿದರು 
ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾವೇರಿ ನಗರದ ಮೀನು ಮಾರುಕಟ್ಟೆಯನ್ನು ಶುಕ್ರವಾರ ನಗರಸಭೆ ಸಿಬ್ದಂದಿ ಬಂದ್‌ ಮಾಡಿಸಿದರು    

ಹಾವೇರಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಆಯುಷ್ ಇಲಾಖೆಯು ಕೆಲವು ಸಲಹೆಗಳನ್ನು ನೀಡಿದೆ.

ಮನೆಯಲ್ಲಿ ಬಳಸುವ ಪದಾರ್ಥಗಳಾದ ಶುಂಠಿ, ಅರಿಸಿನ, ತುಳಸಿ ಇತ್ಯಾದಿಗಳಿಗೆ ಸೋಂಕು ನಿಯಂತ್ರಿಸುವ ಶಕ್ತಿಗಳಿವೆ. ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸುವುದು. ತುಳಸಿ, ಶುಂಠಿ ಹಾಗೂ ಅರಿಸಿನಗಳನ್ನು ಬೀಸಿನೀರಿನಲ್ಲಿ ಕುದಿಸಿ ಸ್ವಲ್ಪ, ಸ್ವಲ್ಪ ಆಗಾಗ ಕುಡಿಯಬೇಕು. ಅಮೃತಬಳ್ಳಿ ಕಾಂಡವನ್ನು ಒಣಗಿಸಿ ಕಷಾಯ ತಯಾರಿಸಿ 15-20 ಮಿಲಿ ದಿನಕ್ಕೆ 2 ಬಾರಿ ಸೇವಿಸುವುದು. ಕೆಮ್ಮು ಇದ್ದಾಗ ಒಂದು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದು. ಶೀತಲೀಕರಿಸಿದ ಪದಾರ್ಥಗಳನ್ನು ಸೇವಿಸಬಾರದು. ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು. ವಿಶ್ರಾಂತಿ ಪಡೆಯಬೇಕು ಹಾಗೂ ಸಮಯಕ್ಕೆ ಸರಿಯಾಗಿ ನಿದ್ರಿಸಬೇಕು.

ಹೆಚ್ಚಿನ ಮಾಹಿತಿಗಾಗಿ 24x7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಅಥವಾ 080-22208541 ಕರೆ ಮಾಡಬಹುದು.

ADVERTISEMENT

ಶೇ 50ರಷ್ಟು ಬಸ್‍ಗಳ ಸೇವೆ ಸ್ಥಗಿತ

ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಬಸ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಮುಂಬೈ, ಕಲಬುರ್ಗಿ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲ ಸಾರಿಗೆ, ವಿಜಯಪುರ ಮಾರ್ಗದ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಕಾರ್ಯಾಚರಣೆಯಾಗುವ ಎಲ್ಲ ಸಾರಿಗೆಗಳನ್ನು, ಕೊಲ್ಹಾಪುರ, ಪುಣೆ, ಗೋವಾ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು ಶೇ 50ರಷ್ಟು ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ. ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು ಶೇ 25ರಷ್ಟು ವೇಗದೂತ ಮತ್ತು ಸುಮಾರು ಶೇ 50ರಷ್ಟು ಪ್ರತಿಷ್ಠಿತ ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

₹8 ಕೋಟಿ ನಷ್ಟ:ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿರುವುದರಿಂದ ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳ ಒಟ್ಟು 9 ವಿಭಾಗಗಳಿಂದ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳಲ್ಲಿ ಮಾರ್ಚ್‌ 19ರಂದು 400 ಅನುಸೂಚಿಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಂಸ್ಥೆಗೆ ಅಂದಾಜು ₹1 ಕೋಟಿ ನಷ್ಟ ಉಂಟಾಗಿರುತ್ತದೆ. ಮಾರ್ಚ್‌ 11ರಿಂದ 19ರವರೆಗೆ 2,723 ಅನುಸೂಚಿಗಳನ್ನು ರದ್ದುಗೊಳಿಸಲಾಗಿದ್ದು, ಇದರಿಂದಾಗಿ ಸಂಸ್ಥೆಗೆ ಅಂದಾಜು ₹7ಕೋಟಿ ನಷ್ಟ ಉಂಟಾಗಿರುತ್ತದೆ. ಪ್ರಸ್ತುತ ಪ್ರಯಾಣಿಕರ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆಗನುಸಾರವಾಗಿ ಸಾರಿಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.