ADVERTISEMENT

ಬೆಳೆ ವಿಮೆ ನೋಂದಣಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ

ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 13:49 IST
Last Updated 21 ಜೂನ್ 2021, 13:49 IST
ಹಾವೇರಿ ನಗರದಲ್ಲಿ ಸೋಮವಾರ ‘ಕೃಷಿ ಅಭಿಯಾನ’ಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ ನೀಡಿದರು. ಶಾಸಕ ನೆಹರು ಓಲೇಕಾರ, ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ ಇದ್ದಾರೆ 
ಹಾವೇರಿ ನಗರದಲ್ಲಿ ಸೋಮವಾರ ‘ಕೃಷಿ ಅಭಿಯಾನ’ಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ ನೀಡಿದರು. ಶಾಸಕ ನೆಹರು ಓಲೇಕಾರ, ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ ಇದ್ದಾರೆ    

ಹಾವೇರಿ: ‘ರಾಜ್ಯದಾದ್ಯಂತ ಕೃಷಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯ ಕುರಿತು ರೈತರಿಗೆ ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಹಾವೇರಿ ನಗರದಲ್ಲಿ ಸೋಮವಾರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ, ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಹೋಬಳಿ ಮಟ್ಟದಲ್ಲಿ ಮೂರು ದಿನ ಅಭಿಯಾನ ಆಯೋಜಿಸುವ ಮೂಲಕ ಪ್ರತಿ ಹಳ್ಳಿಗಳಲ್ಲಿ ರೈತರಿಗೆ ಇಲಾಖೆ ಕಾರ್ಯಕ್ರಮಗಳ ಮಾಹಿತಿ ನೀಡಲಾಗುವುದು. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಬೆಳೆ ಸಮೀಕ್ಷೆ:

ADVERTISEMENT

‘ಬೆಳೆ ವಿಮೆ’ ಬಗ್ಗೆ ರಾಜ್ಯದಾದ್ಯಂತ ಕೃಷಿ ಇಲಾಖೆಯಿಂದ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ರೈತರು ನಿಗದಿತ ಅವಧಿಯೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬೇಕು.ಕಳೆದ ವರ್ಷ ‘ಬೆಳೆ ಸಮೀಕ್ಷೆ’ ಯೋಜನೆಯಡಿ ರಾಜ್ಯದ 2.10 ಕೋಟಿ ಪ್ಲಾಟ್‌ಗಳಲ್ಲಿ 46 ಲಕ್ಷ ಪ್ಲಾಟ್‌ಗಳನ್ನು ರೈತರೇ ಸಮೀಕ್ಷೆ ಮಾಡಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ರೈತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬೀಜ, ಗೊಬ್ಬರ ಕೊರತೆಯಿಲ್ಲ:

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರವನ್ನು ಪೂರೈಕೆ ಮಾಡಲಾಗಿದ್ದು, ಯಾವುದೇ ಕೊರತೆಯಿಲ್ಲ. ಮುಂದಿನ ದಿನಗಳಲ್ಲಿ ಯೂರಿಯೂ ಗೊಬ್ಬರವನ್ನೂ ಪೂರೈಕೆ ಮಾಡಲಾಗುವುದು.

ಮಿಶ್ರಬೆಳೆಗೆ ಪ್ರೋತ್ಸಾಹ:

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಜ್ಯದಾದ್ಯಂತ 12.60 ಕೋಟಿ ಮೊತ್ತದ ತೊಗರಿ, ಶೇಂಗಾ ಹಾಗೂ ಸೋಯಾ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ರೈತರು ಮಿಶ್ರಬೆಳೆ ಬೆಳೆಯುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು. ಕೃಷಿ ಇಲಾಖೆಯ ‘ಬೆಳೆ ವಿಮೆ’ ಮಾಹಿತಿಯ ಪ್ರಚಾರ ಪತ್ರಗಳನ್ನು ಬಿಡುಗಡೆಗೊಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಶನ್‌, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ಉಪ ಕೃಷಿ ನಿರ್ದೇಶಕರಾದ ಯಲ್ಲಪ್ಪ ಕೊರವರ ಹಾಗೂ ಸ್ಪೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.