ಹಾವೇರಿ ತಾಲ್ಲೂಕಿನ ಮೆಳ್ಳಿಗಟ್ಟಿ ಬಳಿ ರೈತರೊಬ್ಬರು ತಮ್ಮ ಜಮೀನು ಹದಗೊಳಿಸಿದರು
– ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ತಡಸ: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಮಳೆಯಿಂದ ಖುಷಿಯಾಗಿರುವ ಹಲವು ರೈತರು, ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಕೆಲ ರೈತರು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಧುಂಡಶಿ ಹೋಬಳಿಯ ತಡಸ, ಕುನ್ನೂರು, ನೀರಲಗಿ, ತಿಮ್ಮಾಪುರ, ಕಡಳ್ಳಿ, ಶ್ಯಾಡಂಬಿ ಗ್ರಾಮದಲ್ಲಿ ರೈತರು, ಕೆರೆ ಕಟ್ಟೆಯ ಜವಳು ಭತ್ತದ ಗದ್ದೆಗಳನ್ನು ಬಿತ್ತನೆ ಮಾಡಲು ಪ್ರಾರಂಭಿಸಿದ್ದಾರೆ.
ಧುಂಡಶಿ ಹೋಬಳಿಯಲ್ಲಿ ಒಟ್ಟು 12,840 ಬಿತ್ತನೆ ಕ್ಷೇತ್ರವಿದೆ. 6ರಿಂದ 7 ಸಾವಿರ ಹೆಕ್ಟೆರ್ ಗೋವಿನಜೋಳ, 120 ಹೆಕ್ಟೆರ್ ಸೋಯಾಬೀನ್, 3ರಿಂದ 4 ಸಾವಿರ ಹೆಕ್ಟೆರ್‌ನಲ್ಲಿ ಭತ್ತ, 30 ಹೆಕ್ಟೆರ್‌ನಲ್ಲಿ ಶೇಂಗಾ, ಉಳಿದ ಕ್ಷೇತ್ರದಲ್ಲಿ ಹತ್ತಿ ಬೆಳೆಯುವ ಗುರಿಯಿದೆ.
ಬಹುತೇಕ ರೈತರು ಶೇ 65ರಷ್ಟು ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆ ಮಾಡುತ್ತಾರೆ. ಸದ್ಯ ಮುಂಗಾರು ಪೂರ್ವ ಮಳೆ ಇರುವುದರಿಂದ ಕೆಲ ರೈತರು ಮಾತ್ರ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಗಾರು ಆರಂಭವಾಗಿ ಮಳೆ ಪ್ರಮಾಣ ಮತ್ತಷ್ಟು ಅಧಿಕಗೊಂಡರೆ, ಕೃಷಿ ಕಾಯಕ ಬಿರುಸುಗೊಳ್ಳಲಿದೆ.
ದುಂಡಶಿ ಹೋಬಳಿಯಲ್ಲಿರುವ 800 ಹೆಕ್ಟೆರ್ ಪ್ರದೇಶದಲ್ಲಿ ಶುಂಠಿ ಬೆಳೆ ಆವರಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯುವ ಪ್ರದೇಶವೂ ಹೆಚ್ಚಾಗಿದೆ. ರೈತರು ತಮ್ಮ ಹೊಲಗಳನ್ನು ಬೇರೆಯವರಿಗೆ ಲಾವಣಿ ರೂಪದಲ್ಲಿ ನೀಡುತ್ತಿದ್ದು, ಅದೇ ಜಮೀನಿನಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದರಿಂದ ಆಹಾರ ಬೆಳೆಗಳ ಬೆಳೆಯುವ ಪ್ರಮಾಣ ಕುಸಿತ ಕಾಣುತ್ತಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಸೋಯಾಬೀನ್, ತೊಗರಿ ಬೀಜಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ಕೆಲ ದಿನಗಳಲ್ಲಿ ಗೋವಿನ ಜೋಳ, ಶೇಂಗಾ ಬಿತ್ತನೆ ಬೀಜ ಸಹ ಲಭ್ಯವಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ ವರ್ಷ ಸುರಿದ ಭಾರಿ ಮಳೆಗೆ ರೈತರ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದೆ. ಈ ವರ್ಷವಾದರೂ ತಕ್ಕಮಟ್ಟಿಗೆ ಮಳೆಯಾದರೆ ರೈತರಿಗೆ ಅನುಕೂಲ. ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸರ್ಕಾರ ನೀಡಬೇಕು’ ಎಂದು ರೈತ ಚನ್ನಬಸಯ್ಯ ಪೂಜಾರ ಹೇಳಿದರು.
‘ಡಿಎಪಿ ಬಿತ್ತನೆ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಂಥ ಮಾರಾಟಗಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈತರಾದ ಸಣ್ಣಪ್ಪ ಅಂಗಡಿ ದೇವಪ್ಪ ಹಂಚಿನಮನಿ ಶಿವಾನಂದ್ ಮಾನ್ವಿ ಯಲ್ಲಪ್ಪ ಹಂಚಿನಮನಿ ಆಗ್ರಹಿಸಿದರು. ‘ಮಾರಾಟಗಾರರು ಡಿಎಪಿ ಬಿತ್ತನೆ ಗೊಬ್ಬರವನ್ನು ₹ 1500ಕ್ಕೆ ಮಾರುತ್ತಿದ್ದಾರೆ. ಇದರ ಜೊತೆಗೆ ಬೇರೆ ಗೊಬ್ಬರ ಲಿಂಕ್ ನೀಡಿ ರೈತರಿಗೆ ಆರ್ಥಿಕ ಹೊರೆ ಮಾಡುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.